ರಾಷ್ಟ್ರೀಯ

ಚೆನ್ನೈ ಕರಾವಳಿ ತೀರಕ್ಕೆ ಅಪ್ಪಳಿಸಿದ “ವರ್ಧಾ” ಚಂಡಮಾರುತ; ಧರೆಗುರುಳಿದ ಸಾವಿರಾರು ಮರಗಳು, ಹಲವೆಡೆ ಭೂಕುಸಿತ

Pinterest LinkedIn Tumblr

chennai-rains

ಚೆನ್ನೈ: ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಚೆನ್ನೈ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಸಾವಿರಾರು ಮರಗಳು ಧರೆಗುರುಳಿದೆ ಎಂದು ತಿಳಿದುಬಂದಿದೆ.

ಗಂಟೆಗೆ 150 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೀಸುವ ಗಾಳಿಯಿಂದಾಗಿ ಕುಂಭದ್ರೋಣ ಮಳೆ ಸುರಿಯುತ್ತಿದೆ. ಇದರಿಂದಾಗಿ ಸಾವಿರಾರು ಮರಗಳು ಧರೆಗುರುಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

chennai-storm

ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತುರ್ತು ಸಂಪುಟ ಸಭೆ ನಡೆಸಿ, ಅಗತ್ಯ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನೌಕಾಪಡೆ ಹಾಗೂ ಸೇನಾ ಸಿಬ್ಬಂದಿಗೆ ಸದಾ ಸನ್ನದ್ಧರಾಗುವಂತೆ ಸೂಚಿಸಲಾಗಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಬಸ್, ರೈಲು, ವಿಮಾನ ಸಂಚಾರಕ್ಕೆ ವ್ಯತ್ಯಯವಾಗಿದೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ 25ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರು ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಈಗಾಗಲೇ ಅನುಮತಿ ನೀಡಲಾಗಿದೆ.

ದಕ್ಷಿಣ ರೈಲ್ವೆ, ಚೆನ್ನೈ ಬೀಚ್ ಮತ್ತು ವೇಲಚಱ್ರಿ, ಎಂ.ಆರ್. ಜಿ.ಎಸ್. ಮಾರ್ಗಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಬರ್‌ಬನ್ ರೈಲ್ವೆ ಸಂಚಾರ ಸೇವೆ ರದ್ದು ಮಾಡಿರುವುದರಿಂದ ಸಾವಿರಾರು ಪ್ರಯಾಣಿಕರು ಮುಂದೇನು ಮಾಡುವುದು ಎಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ಮತ್ತೊಂದೆಡೆ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪೂಂಡಿ, ಚಂಬರ ಪಾಕಂ ಸೇರಿದಂತೆ, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಂತಹ ಪ್ರದೇಶಗಳಲ್ಲಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದ್ದು, ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಸರ್ವರೀತಿಯಲ್ಲಿ ಸೇನೆ ಹಾಗೂ ಸ್ಥಳೀಯ ಆಡಳಿತ ಸಜ್ಜುಗೊಂಡಿದೆ.

ವಾರ್ಧಾ ಚಂಡಮಾರುತದಿಂದ ಚೆನ್ನೈನ ಕೆಲವು ಪ್ರದೇಶಗಳಲ್ಲಿ 7 ರಿಂದ 20 ಸೆಂ.ಮೀ. ವರೆಗೂ ಮಳೆಯಾಗುತ್ತಿದೆ. ತಿರುವಳ್ಳುವರ್, ಕಾಂಚಿಪುರಂನಲ್ಲಿ ಭಾರಿ ಮಳೆಯಾಗುತ್ತಿದ್ದು, ಪೂಂಡಿ ಮತ್ತು ಚಂಬರ ಪಾಕಂನ ಜಲಾಶಯ ನೀರಿನ ಮಟ್ಟ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಪ್ರದೇಶದಲ್ಲಿರುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಖಾಸಗಿ ಕಂಪನಿಗಳಿಗೆ ರಜೆ ನೀಡ‌ಲಾಗಿದೆ.

ಸಮುದ್ರದ ದಡಕ್ಕೆ 20 ಮೀಟರ್ (60 ಅಡಿ) ಎತ್ತರದ ಅಲೆಗಳು ಬಂದು ಅಪ್ಪಳಿಸುತ್ತಿದ್ದು, ತಮಿಳುನಾಡಿನಲ್ಲಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳು ಇವೆ.

ವಾರ್ದಾ ಚಂಡಮಾರುತ ದುರ್ಬಲಗೊಳ್ಳಲಿದೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ ಹುಸಿಯಾಗಿದ್ದು, ಚಂಡಮಾರುತ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.

ಆಂಧ್ರದಲ್ಲೂ ಕಟ್ಟೆಚ್ಚರ

ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶ್ರೀ ಹರಿಕೋಟಾ, ನೆಲ್ಲೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ನೆಲ್ಲೂರಿನಲ್ಲಿ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಆಂಧ್ರ ಪ್ರದೇಶದಿಂದ ವಿವಿಧ ಭಾಗಗಳಿಗೆ ಎಲ್ಲಾ ರೈಲು, ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

Comments are closed.