ಕೋಲ್ಕತಾ: ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮೋದಿ ಬಾಬು ಬಳಿ ನೋಟ್ ನಿಷೇಧಕ್ಕೆ ಭಾಷಣ ಹೊರತು ಬೇರೆ ಪರಿಹಾರ ಇಲ್ಲ ಎಂದಿದ್ದಾರೆ.
ನೋಟ್ ನಿಷೇಧದಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೆ, ಮೋದಿ ಮಾತ್ರ ಬರೀ ಭಾಷಣ ಮಾಡುತ್ತಿದ್ದಾರೆ. ನೋಟ್ ನಿಷೇಧ ಈಗ ಹಳಿ ತಪ್ಪಿದೆ. ಭಾಷಣ ಹೊರತು ಅವರ ಬಳಿ ಬೇರೆ ಪರಿಹಾರ ಇಲ್ಲ ಎಂದು ದೀದಿ ಟ್ವೀಟ್ ಮಾಡಿದ್ದಾರೆ.
ಮೊದಲಿನಿಂದಲೂ ನೋಟ್ ನಿಷೇಧವನ್ನು ವಿರೋಧಿಸಿದ್ದ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.
ಇಂದು ಬೆಳಗ್ಗೆಯಷ್ಟೇ ಗುಜರಾತ್ ನಲ್ಲಿ ಭಾಷಣ ಮಾಡಿದ್ದ ಮೋದಿ, ನೋಟು ನಿಷೇಧದಿಂದ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗಲಿದೆ. ಸರ್ಕಾರದ ಈ ನಿರ್ಧಾರವನ್ನು ಇಡೀ ದೇಶದ ಜನತೆ ಸ್ವಾಗತಿಸಿದ್ದಾರೆ. ನೋಟು ನಿಷೇಧಕ್ಕೂ ಮೊದಲು ಪ್ರಾಮಾಣಿಕರಿಗೆ ತೊಂದರೆ ಆಗುತ್ತಿತ್ತು. ಆದರೆ ಈಗ ಕಾಳಧನಿಕರಿಗೆ ತೊಂದರೆಯಾಗುತ್ತಿದೆ. ನಮ್ಮ ಹೋರಾಟ ಭಯೋತ್ಪಾದನೆ ಹಾಗೂ ಕಾಳಧನಿಕರ ವಿರುದ್ಧವೇ ಹೊರತು ಬಡವರ ವಿರುದ್ಧವಲ್ಲ. ಬಡವರ ಹಿತಕ್ಕಾಗಿ ನೋಟು ನಿಷೇಧ ಮಾಡಲಾಗಿದೆ ಎಂದು ಹೇಳಿದ್ದರು. ಅಲ್ಲದೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಬದಲು ಹಣ ವರ್ಗಾವಣೆಗೆ ಮೊಬೈಲ್ ಬ್ಯಾಂಕಿಂಗ್ ಬಳಸುವಂತೆ ಕರೆ ನೀಡಿದ್ದರು.