ರಾಷ್ಟ್ರೀಯ

ಎರಡು ವಾರದೊಳಗೆ ನೋಟು ಸಮಸ್ಯೆಗೆ ಪರಿಹಾರ: ಕೇಂದ್ರ

Pinterest LinkedIn Tumblr

atmನವದೆಹಲಿ: ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ 10-15 ದಿನಗಳಲ್ಲಿ ನೋಟು ಸಮಸ್ಯೆ ಪರಿಹಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‍ಗೆ ಹೇಳಿದೆ.

₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ದೇಶದಲ್ಲಿ ನೋಟು ಸಮಸ್ಯೆ ತಲೆದೋರಿದೆ, ಈ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ ನಾವೇನೂ ಕೆಲಸ ಮಾಡದೆ ಕೈ ಕಟ್ಟಿ ಕುಳಿತಿಲ್ಲ. ಈ ಸಮಸ್ಯೆ 10-15 ದಿನಗಳಲ್ಲಿ ಬಗೆಹರಿಯುತ್ತದೆ.

ದೇಶದಲ್ಲಿನ ನೋಟು ರದ್ದತಿ ನಿರ್ಧಾರದ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ತಳ್ಳಿ ಹಾಕಿದ ಕೇಂದ್ರ ಸರ್ಕಾರ ಈ ನಿರ್ಧಾರದಿಂದಾಗಿ ಸಾಮಾಜಿಕ ಕ್ಷೋಭೆ ನಡೆದಿರುವ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದೆ.

₹500 ಮತ್ತು ₹1000 ಮುಖಬೆಲೆ ನೋಟುಗಳನ್ನು ರದ್ದು ನಿರ್ಧಾರದಿಂದ ತಲೆದೋರಿರುವ ನೋಟು ಸಮಸ್ಯೆ ಬಗ್ಗೆ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ, ನೋಟು ರದ್ದತಿ ಮಾಡುವ ಮುನ್ನ ಹೊಸ ನೋಟುಗಳನ್ನು ಮುದ್ರಿಸಿ ಶೇಖರಿಸಿಡುವುದರಿಂದ ಗೌಪತ್ಯೆ ಕಾಪಾಡಲು ಕಷ್ಟವಾಗುತ್ತಿತ್ತು ಎಂದಿದೆ.

ನೋಟು ರದ್ದತಿಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ರೀತಿ ಉತ್ತರಿಸಿದೆ.

ಬ್ಯಾಂಕ್ ಖಾತೆಯಿಂದ ಒಂದು ವಾರದಲ್ಲಿ ₹24,000 ವಿತ್‍ಡ್ರಾ ಮಾಡಬಹುದೆಂದು ಸರ್ಕಾರ ಹೇಳುತ್ತಿದೆ. ಆದರೆ ಬ್ಯಾಂಕ್‍ಗಳಲ್ಲಿಯೇ ಇಷ್ಟೊಂದು ದುಡ್ಡು ಇಲ್ಲ ಎಂಬ ಅರ್ಜಿಗಳೂ ಸುಪ್ರೀಂಕೋರ್ಟ್ ಸುಪರ್ದಿಯಲ್ಲಿದೆ.

ಈ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದಾಗ, ಎಲ್ಲರಿಗೂ ದುಡ್ಡು ಸಿಗಲಿ ಎಂಬ ಕಾರಣದಿಂದ ವಿತ್‍ಡ್ರಾ ಮಾಡುವ ಹಣವನ್ನು ನಿರ್ದಿಷ್ಟ ಮಿತಿಗೊಳಪಡಿಸಲಾಗಿದೆ ಎಂದು ಉತ್ತರಿಸಿದೆ.

Comments are closed.