ಚೆನ್ನೈ, ಡಿ. ೯- ತಮಿಳುನಾಡಿನ ದಿ. ಮುಖ್ಯಮಂತ್ರಿ ಜಯಲಲಿತಾರ ಸಾವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಜಯಲಲಿತಾ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ವಿಧಿವಿಧಾನಗಳನ್ನು ರಹಸ್ಯವಾಗಿಟ್ಟಿದ್ದು ಹಾಗೂ ಯಾವುದೇ ಗಣ್ಯರಿಗೆ ಜಯ ಭೇಟಿಗೆ ಅವಕಾಶ ನೀಡದಿರುವ ಕ್ರಮಗಳ ಬಗ್ಗೆ ತಮಿಳುನಾಡಿನಾದ್ಯಂತ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿ ಜಯ ಸಾವಿನ ಬಗ್ಗೆ ಹಲವಾರು ಗುಮಾನಿಗಳು ವ್ಯಕ್ತವಾಗಿವೆ.
ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಜಯಾ ಅವರ ಆರೋಗ್ಯ ಸುಧಾರಿಸಿದೆ ಎಂದೇ ಬಿಂಬಿಸಲಾಗುತ್ತಿತ್ತು. ಕೆಲ ದಿನಗಳ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಲಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆಯಾಗಿದೆ ಎಂದು ಹೆಸರಾಂತ ಚಿತ್ರನಟಿ ಗೌತಮಿ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಜಯಲಲಿತಾ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ರಾಜಕಾರಣಿಗಳು, ಗಣ್ಯರು ಆಸ್ಪತ್ರೆಗೆ ಭೇಟಿ ನೀಡುವ ಪ್ರಯತ್ನ ನಡೆಸಿದ್ದರೂ ಯಾರೊಬ್ಬರಿಗೂ ಜಯಾ ಅವರನ್ನು ಭೇಟಿ ಮಾಡಲು ಅವಕಾಶವನ್ನು ಕಲ್ಪಿಸಲಿಲ್ಲ. ಹಾಗಾಗಿ, ಕೊನೆಗಾಲದಲ್ಲಿ ಅವರ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಜಯಲಲಿತಾ ಅವರ ಆರೋಗ್ಯವನ್ನು ಗುಟ್ಟಾಗಿ ಇಟ್ಟಿದ್ದು ಏಕೆ? ಅನಾರೋಗ್ಯ, ಚಿಕಿತ್ಸೆ ವಿಷಯದಲ್ಲಿ ಯಾವ ವ್ಯಕ್ತಿ ನಿರ್ಣಯ ಕೈಗೊಳ್ಳುತ್ತಿದ್ದರು ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ಬಹುಭಾಷಾ ನಟಿ ಗೌತಮಿ ಕೇಳಿದ್ದಾರೆ.
ನಿಧನದ ಬಗ್ಗೆ ಉದ್ಭವಿಸಿರುವ ಶಂಕೆ, ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ. ಪ್ರಧಾನಿಯವರು ತಮ್ಮ ಪತ್ರದ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಾರ್ವಜನಿಕರಿಗೆ ಈ ಎಲ್ಲ ಅನುಮಾನಗಳನ್ನು ನಿವಾರಿಸುತ್ತಾರೆ ಎಂದು ನಂಬಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.