ರಾಷ್ಟ್ರೀಯ

ವಿರೋಧ ಪಕ್ಷಗಳ ಬೇಡಿಕೆ ಏನು ಎಂಬುದೇ ನಮಗೆ ಅರ್ಥವಾಗುತ್ತಿಲ್ಲ: ವೆಂಕಯ್ಯ ನಾಯ್ಡು

Pinterest LinkedIn Tumblr

5 Venkayya-Naidu-bgನವದೆಹಲಿ: ಸಂಸತ್ತು ಕಲಾಪದಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ಗದ್ದಲವನ್ನುಂಟು ಮಾಡುತ್ತಿದ್ದು, ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಚರ್ಚೆ ನಡೆಸಲು ಬಿಡುತ್ತಿಲ್ಲ. ವಿರೋಧ ಪಕ್ಷಗಳಿಗೆ ಏನು ಬೇಕೆಂಬುದು ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಬುಧವಾರ ಹೇಳಿದ್ದಾರೆ.
ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಿ 3 ವಾರಗಳು ಕಳೆದಿದ್ದರೂ ಇಂದಿಗೂ ನೋಟು ನಿಷೇಧ ಕುರಿತಂತೆ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದ್ದು, ತೀವ್ರ ಗದ್ದಲ ಹಿನ್ನೆಲೆಯಲ್ಲಿ ಒಂದೂ ದಿನ ಕೂಡ ಕಲಾಪ ಸುಗಮವಾಗಿ ಸಾಗಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಹಾಗೂ ಸ್ಪೀಕರ್ ಮಹಾಜನ್ ಅವರು ವಿರುದ್ಧ ಗುಡುಗಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು, ಕಲಾಪವನ್ನು ನಡೆಸಲು ಸಾಧ್ಯವಾಗದಿದ್ದರೆ, ಪದೇಪದೇ ಕಲಾಪವನ್ನು ಮುಂದೂಡುವ ಬದಲು ಅನಿರ್ದಿಷ್ಟಾವಧಿಗೆ ಮುಂದೂಡಿ ಎಂದು ಹೇಳಿದ್ದರು.
ಅಡ್ವಾಣಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ಅವರು, ಪ್ರತೀಯೊಂದು ವಿಚಾರದಲ್ಲೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ವಿರೋಧ ಪಕ್ಷಗಳು ಚರ್ಚೆ ನಡೆಸಲು ಬಿಡುತ್ತಿಲ್ಲ. ಅಡ್ವಾಣಿಯವರಿಗೆ ಕೋಪ ಬಂದಿದೆ. ಕಲಾಪ ನಡೆಯದಿರುವುದಕ್ಕೆ ನಮಗೂ ಬೇಸರವಿದೆ. ಆದರೆ, ಸಂಸತ್ತು ತನ್ನ ಕೆಲಸ ಮಾಡಲು ವಿರೋಧ ಪಕ್ಷಗಳು ಬಿಡುತ್ತಿಲ್ಲ. ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲವೇಕೆ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷದ ನಾಯಕರ ಬಳಿ ಕೇಳಬೇಕಿದೆ ಎಂದು ಹೇಳಿದ್ದಾರೆ.
ಇನ್ನೆಷ್ಟು ದಿನ ಸಂಸತ್ತಿನ ಕಾರ್ಯಗಳಿಗೆ ಅಡ್ಡಿ ಮಾಡುವುದು ಎಂಬುದರ ಬಗ್ಗೆ ವಿರೋಧ ಪಕ್ಷಗಳು ಚಿಂಚನೆ ನಡೆಸಬೇಕಿದೆ. ಚರ್ಚೆ ನಡೆಸಲು ಅವರ ಬಳಿ ಯಾವುದೇ ವಿಷಯಗಳಿಲ್ಲ. ಪ್ರತಿಯೊಂದು ವಿಷಯದ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ಚರ್ಚೆ ನಡೆಸುವುದು ವಿರೋಧ ಪಕ್ಷಗಳಿಗೆ ಬೇಡವಾಗಿದೆ. ಅವರ ತಂತ್ರಗಳೇನು ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

Comments are closed.