ರಾಷ್ಟ್ರೀಯ

ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂರನ್ನು ಆಯ್ಕೆ ಮಾಡಿದ್ದು ಯಾರು?

Pinterest LinkedIn Tumblr

pannir-selviನವದೆಹಲಿ, ಡಿ. ೭ – ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾರವರ ನಿಧನ ನಂತರ ತಮಿಳುನಾಡಿನ ರಾಜಕಾರಣದಲ್ಲಿ ಯಾವುದೇ ರೀತಿಯ ಅಸ್ಥಿರತೆಗೆ ಅವಕಾಶವಾಗದಂತೆ ಎಲ್ಲವನ್ನೂ ಸಮಭಾವದಿಂದ ತೂಗಿಸಿಕೊಂಡು ರಾಜಕೀಯ ಸ್ಥಿರತೆ ಕಾಪಾಡುವತ್ತ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿತ್ತ ಹರಿಸಿದೆ.

ರಾಜ್ಯಸಭೆ ಹಾಗೂ ಲೋಕಸಭೆ ಎರಡರಲ್ಲೂ ಒಟ್ಟು 56 ಸಂಸದರನ್ನು ಹೊಂದಿರುವ ಎ.ಐ.ಎ.ಡಿ.ಎಂ.ಕೆಯ ನಂಟು ಕೇಂದ್ರ ಸರ್ಕಾರಕ್ಕೆ ಅವಶ್ಯವಿರುವುದರಿಂದ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆಗೆ ಅವಕಾಶವಾಗದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸಿದೆ.

ಜಿ.ಎಸ್.ಟಿ. ಮಸೂದೆ ಅಂಗೀಕಾರ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಕೇಂದ್ರದ ಬೆಂಬಲಕ್ಕೆ ನಿಂತಿದ್ದರೂ ಜಿ.ಎಸ್.ಟಿ.ಯಿಂದ ರಾಜ್ಯಗಳ ಆದಾಯ ಖೋತಾ ಆಗುತ್ತದೆ ಎಂಬ ಅಸಮಾಧಾನವಿದ್ದರೂ, ಪ್ರಧಾನಿ ನರೇಂದ್ರಮೋದಿಯವರ ಜತೆ ಇದ್ದ ಸೌಹಾರ್ದ ಬಾಂಧವ್ಯದ ಕಾರಣ ಜಯಲಲಿತಾ ಜಿ.ಎಸ್.ಟಿ. ಬೆಂಬಲಿಸಿದ್ದರು.

ಕೇಂದ್ರ ಸರ್ಕಾರದ ಬೆಂಬಲಕ್ಕಿರುವ ಎ.ಐ.ಎ.ಡಿ.ಎಂ.ಕೆ ಪಕ್ಷದ ಆಡಳಿತವಿರುವ ತಮಿಳುನಾಡಿನಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಅಸ್ಥಿರತೆಗೆ ಅವಕಾಶವಾಗದಂತೆ ನೋಡಿಕೊಳ್ಳುವತ್ತ ಹೆಚ್ಚಿನ ಒತ್ತು ನೀಡಿದೆ.

ಜಯಲಲಿತಾರವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿರುವ ಆಪ್ತ ಗೆಳತಿ ಶಶಿಕಲಾ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂರವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ಇಬ್ಬರನ್ನೂ ಸರಿದೂಗಿಸುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಓ. ಪನ್ನೀರ್ ಸೆಲ್ವಂರವರ ಸುಗಮ ಆಯ್ಕೆಯ ಹಿಂದೆ ಕೇಂದ್ರ ಸರ್ಕಾರ ನಿಂತಿದ್ದು ಗುಟ್ಟೇನಲ್ಲ. ಕೇಂದ್ರ ಸಚಿವ ವೆಂಕಯ್ಯನಾಯ್ಡುರವರ ನೇರ ರಂಗಪ್ರವೇಶ ನಂತರವೇ ಎ.ಐ.ಎ.ಡಿ.ಎಂ.ಕೆ.ಯ ಶಾಸಕಾಂಗ ಪಕ್ಷದ ನಾಯಕರಾಗಿ ಪನ್ನೀರ್ ಸೆಲ್ವಂ ಆಯ್ಕೆ ಸುಗಮವಾಯಿತು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿರುವ ಜಯಲಲಿತಾ ಆಪ್ತೆ ಶಶಿಕಲಾ ಸದ್ಯಕ್ಕೆ ಮುಖ್ಯಮಂತ್ರಿಯಾಗುವ ಆಸೆಯನ್ನು ಅದಮಿಟ್ಟುಕೊಂಡಿರಬಹುದು. ಆದರೆ ಪಕ್ಷದ ಪ್ರಭಾವಿ ಹುದ್ದೆಯಾದ ಪ್ರಧಾನ ಕಾರ್ಯದರ್ಶಿ ಹುದ್ದೆ ಶಶಿಕಲಾ ಪಾಲಾದರೆ ಪಕ್ಷ ಅವರ ಹಿಡಿತಕ್ಕೆ ಬರುತ್ತದೆ. ಇದು ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಹಾಗೂ ಶಶಿಕಲಾರವರ ಸಂಘರ್ಷಕ್ಕೆ ಕಾರಣವಾದರೆ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಪರಿಸ್ಥಿತಿ ಮೂಡಬಹುದು. ಹಾಗಾಗಿಯೇ ಕೇಂದ್ರ ತಮಿಳುನಾಡಿನಲ್ಲಿ ರಾಜಕೀಯ ಸ್ಥಿರತೆಗೆ ಗಮನ ಹರಿಸಿದೆ. ತನ್ನ ಬೆಂಬಲಕ್ಕಿರುವ ಪಕ್ಷದ ಸರ್ಕಾರಕ್ಕೆ ತೊಂದರೆಯಾಗದಂತೆ ತಂತ್ರಗಳನ್ನು ರೂಪಿಸುತ್ತಿದೆ.

ಪನ್ನೀರ್ ಸೆಲ್ವಂ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ, ಮತ್ತೊಬ್ಬರು ಅಪಸ್ವರ ಎತ್ತುವ ಮೊದಲೇ ರಾಜ್ಯಪಾಲ ವಿದ್ಯಾಸಾಗರ್ ವಿಳಂಬ ಮಾಡದೇ ಪನ್ನೀರ್ ಸೆಲ್ವಂರವರಿಗೆ ಮಧ್ಯರಾತ್ರಿಯೇ ಪ್ರಮಾಣವಚನ ಬೋಧಿಸಿ ಸಿ.ಎಂ ಹುದ್ದೆ ಖಾಲಿ ಉಳಿಯದಂತೆ ನೋಡಿಕೊಂಡರು. ಇದು ಕೂಡ ಕೇಂದ್ರ ಸರ್ಕಾರದ ತಂತ್ರಗಾರಿಕೆಯ ರಾಜಕಾರಣವೇ.

ಸದ್ಯಕ್ಕಂತು ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿರುವ ಶಶಿಕಲಾ ಹಾಗೂ ಅವರ ಮಾನಗುಡಿ ಮಾಫಿಯಾ ಸುಮ್ಮನಿರಬಹುದು. ಆದರೆ, ಮುಂದೆ ಅಧಿಕಾರಕ್ಕಾಗಿ ಸಂಘರ್ಷ ಉಂಟಾಗಬಹುದು. ಕಾರಣ, ಶಾಸಕರಲ್ಲಿ ಬಹುತೇಕರನ್ನು ಗುರುತಿಸಿ ವಿಧಾನಸಭಾ ಟಿಕೆಟ್ ಕೊಡಿಸಿದ್ದೇ ಶಶಿಕಲಾ. ಹಾಗಾಗಿ, ಶಶಿಕಲಾ ಸುಮ್ಮನೆ ಕೂರುವುದಿಲ್ಲ.

ಇದೆಲ್ಲವನ್ನು ಅರಿತಿರುವ ಕೇಂದ್ರ ಸರ್ಕಾರ ತಮಿಳುನಾಡು ರಾಜಕಾರಣದತ್ತ ಹೆಚ್ಚಿನ ಆಸ್ಥೆ ವಹಿಸಿದೆ. ಪನ್ನೀರ್ ಸೆಲ್ವಂ ಮೂಲಕ ರಾಜಕಾರಣದ ದಾಳಗಳನ್ನು ಉರುಳಿಸುವ ಸಾಧ್ಯತೆ ಹೆಚ್ಚಿದೆ.

Comments are closed.