ರಾಷ್ಟ್ರೀಯ

ಹಳೆಯ 500ರ ನೋಟು ಚಲಾವಣೆಗೆ ಡಿ.15ರ ಬದಲಾಗಿ ಇಂದು ಕೊನೆ ದಿನ

Pinterest LinkedIn Tumblr

note111ನವದೆಹಲಿ: ರದ್ದುಗೊಂಡಿರುವ ಹಳೆಯ ₹500 ಮುಖಬೆಲೆಯ ನೋಟುಗಳನ್ನು ಇಂಧನ‌, ವಿಮಾನದ ಟಿಕೆಟ್‌, ಎಲ್‌ಪಿಜಿ ಖರೀದಿಗೆ ಬಳಸಬಹುದಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಿದೆ. ಹಳೆಯ ₹500ರ ನೋಟುಗಳ ಬಳಕೆಗೆ ಡಿಸೆಂಬರ್‌ 2 (ಶುಕ್ರವಾರ) ಕೊನೆಯ ದಿನ ಎಂದು ಕೇಂದ್ರ ಘೋಷಿಸಿದೆ.

ಹಳೆಯ ₹500ರ ನೋಟುಗಳನ್ನು ಇಂಧನ, ವಿಮಾನ ಟಿಕೆಟ್‌, ಎಲ್‌ಪಿಜಿ ಖರೀದಿಗೆ ಬಳಸಲು ಡಿಸೆಂಬರ್‌ 15 ಕೊನೆಯ ದಿನ ಎಂದು ನಿಗದಿ ಪಡಿಸಲಾಗಿತ್ತು. ಈ ನಿರ್ಧಾರವನ್ನು ಬದಲಿಸಿರುವ ಕೇಂದ್ರ ಸರ್ಕಾರ ಡಿ.2 ಅಂತಿಮ ದಿನ ಎಂದು ನಿಗದಿಪಡಿಸಿದೆ.

ಇದಲ್ಲದೆ ಪೆಟ್ರೋಲ್‌ ಬಂಕ್‌, ಏರ್‌ಲೈನ್ಸ್‌ ಏಜೆನ್ಸಿ, ಗ್ಯಾಸ್‌ ಡಿಸ್ಟ್ರಿಬ್ಯೂಟರ್‌ಗಳು ಡಿ.3ರಿಂದ ಹೊಸ ನೋಟುಗಳ ಮೂಲಕ ವ್ಯವಹಾರ ನಡೆಸಬೇಕು ಎಂದು ನಿರ್ದೇಶನ ನೀಡಿದೆ.

ನವೆಂಬರ್‌ 8ರಂದು ₹500, ₹1000 ಮುಖಬೆಲೆಯ ಹಳೆಯ ನೋಟುಗಳ ಚಲಾವಣೆ ರದ್ಧು ಮಾಡಿದ್ದ ಸರ್ಕಾರ ನೋಟು ಬದಲಾವಣೆಗೆ 3 ದಿನಗಳ ಗಡುವು ನೀಡಿತ್ತು. ನಂತರ ಮತ್ತೆ ನಿಯಮ ಸಡಿಲಿಸಿ ನವೆಂಬರ್‌ 24ರವರೆಗೆ ಅವಕಾಶ ನೀಡಿ, ಪೆಟ್ರೋಲ್‌ ಬಂಕ್‌, ವಿದ್ಯುತ್‌ ಬಿಲ್‌ ಪಾವತಿ, ವಿಮಾನಗಳ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಹಾಗೂ ಆಸ್ಪತ್ರೆ, ಬಸ್‌ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಹಳೆಯ ನೋಟು ಚಲಾವಣೆಗೆ ಅವಕಾಶ ನೀಡಿತ್ತು.

ಹೆಚ್ಚಿನ ಪ್ರಮಾಣದಲ್ಲಿ ನೋಟು ಬದಲಾವಣೆ ಪ್ರಕ್ರಿಯೆಯನ್ನು ಗಮನಿಸಿದ ಸರ್ಕಾ‌ರ ಡಿಸೆಂಬರ್‌ 15ರವರೆಗೆ ಸಮಯ ನೀಡಿತ್ತು. ಆದರೆ ತನ್ನ ನಿರ್ಧಾರದಲ್ಲಿ ದಿಢೀರ್‌ ಬದಲಾವಣೆ ಮಾಡಿರುವ ಸರ್ಕಾರ ಹಳೆನೋಟುಗಳ ಬದಲಾವಣೆ ದಿನಾಂಕವನ್ನು ಡಿ.‌2ಕ್ಕೆ ಅಂತಿಮಗೊಳಿಸಿದೆ.

Comments are closed.