ರಾಷ್ಟ್ರೀಯ

ಕಪ್ಪು ಹಣ ಸಕ್ರಮಗೊಳಿಸುವ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆ ಅಂಗೀಕಾರ

Pinterest LinkedIn Tumblr

parliament_CUTOUTನವದೆಹಲಿ: ಕಪ್ಪುಹಣ ಹೊಂದಿರುವವರು ಭಾರಿ ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಅದನ್ನು ಸಕ್ರಮಗೊಳಿಸಲು ಸಾಧ್ಯವಾಗುವಂತೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ.

ನೋಟು ರದ್ದತಿಯ ನಂತರ ಬ್ಯಾಂಕುಗಳಲ್ಲಿ ಜಮೆ ಮಾಡಲಾದ ದಾಖಲೆರಹಿತ ಕಪ್ಪುಹಣಕ್ಕೆ ದಂಡ ಮತ್ತು ಮೇಲ್ತೆರಿಗೆ ಸೇರಿ ಶೇ 50ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ದಾಖಲೆರಹಿತ ಹಣವನ್ನು ಘೋಷಣೆ ಮಾಡದೆ ನಂತರ ಸಿಕ್ಕಿಬಿದ್ದರೆ ಅವರಿಂದ ಗರಿಷ್ಠ ಶೇ 85ರಷ್ಟು ತೆರಿಗೆ ವಸೂಲು ಮಾಡಲು ಯೋಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಣೆ ಮಾಡಿದ ಮೂರು ವಾರಗಳ ನಂತರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಿದ್ದುಪಡಿ ಮಸೂದೆಯನ್ನು ನಿನ್ನೆ ಲೋಕಸಭೆಯಲ್ಲಿ ಮಂಡಿಸಿದರು.

ತಮ್ಮಲ್ಲಿರುವ ಕಪ್ಪುಹಣವನ್ನು ಬದಲಾಯಿಸುವುದಕ್ಕೆ ಜನರು ಕಾನೂನುಬಾಹಿರ ದಾರಿ ಹುಡುಕಿಕೊಳ್ಳುವುದನ್ನು ತಪ್ಪಿಸಲು ಸರ್ಕಾರವೇ ಕಾನೂನುಬದ್ಧ ಅವಕಾಶ ನೀಡಬೇಕು ಎಂದು ಪರಿಣತರು ಸಲಹೆ ನೀಡಿದ್ದಾರೆ. ಇಂತಹ ಹಣಕ್ಕೆ ಭಾರಿ ತೆರಿಗೆ ಮತ್ತು ದಂಡ ವಿಧಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಆಧಾರದಲ್ಲಿ ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಲೋಕಸಭೆಯಲ್ಲಿ ಜೇಟ್ಲಿ ಹೇಳಿದ್ದಾರೆ.

ಇದರಿಂದಾಗಿ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳಲು ಸರ್ಕಾರಕ್ಕೆ ಹೆಚ್ಚುವರಿ ಹಣ ದೊರೆಯುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಈ ಮಸೂದೆಯನ್ನು ಲೋಕಸಭೆಯಲ್ಲಿ ಹಣಕಾಸು ಮಸೂದೆಯಾಗಿ ಮಂಡನೆ ಮಾಡಿರುವುದರಿಂದ ರಾಜ್ಯಸಭೆಯ ಅಂಗೀಕಾರ ಅಗತ್ಯವಿಲ್ಲ.

ನಿನ್ನೆ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಮಸೂದೆಗೆ ಅಂಗೀಕಾರ ನೀಡುವುದರ ವಿರುದ್ಧ ವಿಪಕ್ಷಗಳು ಗದ್ದಲ ಸೃಷ್ಟಿಸಿದರೂ ಗದ್ದಲದ ನಡುವೆಯೇ ಮಸೂದೆ ಅಂಗೀಕರಿಸಲಾಗಿದೆ.

ಇದೇ ಮೊದಲ ಬಾರಿಗೆ ಯಾವುದೇ ರೀತಿಯ ಚರ್ಚೆ ನಡೆಸದೆ ಹಣಕಾಸು ಮಸೂದೆಯೊಂದಕ್ಕೆ ಅಂಗೀಕಾರ ಲಭಿಸಿದೆ. ದನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ.

Comments are closed.