ರಾಷ್ಟ್ರೀಯ

ನಮ್ಮಲ್ಲಿ ದೇಶ ಭಕ್ತ ಮುಸಲ್ಮಾನರಿರುವಾಗ ಇಸಿಸ್ ಉಗ್ರರು ದೊಡ್ಡ ಸಮಸ್ಯೆ ಎನಿಸುವುದಿಲ್ಲ: ಸಚಿವ ರಾಜನಾಥ ಸಿಂಗ್

Pinterest LinkedIn Tumblr

rajanath-singh

ಹೈದರಾಬಾದ್: ಭಾರತದಲ್ಲಿ ದೇಶಭಕ್ತ ಇಸ್ಲಾಂ ಅನುಯಾಯಿಗಳಿರುವಾಗ ಇಸಿಸ್ ಉಗ್ರರು ದೊಡ್ಡ ಸಮಸ್ಯೆ ಎನಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಹೇಳಿದ್ದಾರೆ.

ಡಿಜಿಪಿ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿರುವ ಅವರು, ಭಾರತದ ವಿರುದ್ಧ ನೆರೆರಾಷ್ಟ್ರ ಪಾಕಿಸ್ತಾನ ಸಾಕಷ್ಟು ಪಿತೂರಿಗಳನ್ನು ಮಾಡುತ್ತಿದೆ. ಆದರೆ, ರಾಷ್ಟ್ರದಲ್ಲಿ ದೇಶಭಕ್ತ ಇಸ್ಲಾಂ ಅನುಯಾಯಿಗಳಿದ್ದು, ಇಸಿಸ್ ಉಗ್ರ ಸಂಘಟನೆ ದೇಶಕ್ಕೆ ದೊಡ್ಡ ಬೆದರಿಕೆ ಎನಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವುದನ್ನು ಪಾಕಿಸ್ತಾನ ಈಗಲೂ ನಿಲ್ಲಿಸಿಲ್ಲ. ಭಾರತದ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಜನರಿಗೆ ನೆರೆರಾಷ್ಟ್ರ ಕುಮ್ಮಕ್ಕು ನೀಡುತ್ತಿದೆ. ಉಗ್ರರಿಗೆ ಬೆಂಬಲವನ್ನು ನೀಡಿ, ಅವರಿಗೆ ತರಬೇತಿ ನೀಡಿ ದಾಳಿ ನಡೆಸಲು ಭಾರತದೊಳಗೆ ಕಳುಹಿತ್ತಿರುವುದು ನಮಗೆ ಗೊತ್ತಿರುವ ವಿಚಾರ ಆದರೆ, ಈ ಎಲ್ಲಾ ಪ್ರಯತ್ನಗಳ ನಡುವೆಯೂ ಭಾರತ ಸುರಕ್ಷಿತವಾಗಿದೆ. ಇದರ ಕೀರ್ತಿ ಏನಿದ್ದರೂ ನಮ್ಮ ಭದ್ರತಾ ಸಿಬ್ಬಂದಿಗಳು ಹಾಗೂ ಗುಪ್ತಚರ ಇಲಾಖೆಗೆ ಸೇರಬೇಕಿದೆ.

ಇಸಿಸ್ ಉಗ್ರ ಸಂಚು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯ ಹಾಗೂ ಕೇಂದ್ರದ ಸೇನಾ ಪಡೆಗಳ ಉತ್ತಮ ಹೊಂದಾಣಿಕೆಯಿಂದಾಗಿ ಉಗ್ರ ಸಂಘಟನೆಗಳ ಕಡೆಗೆ ಸೆಳೆತಕ್ಕೊಳಗಾಗಿರುವ ಯುವಕರು ಸಂಘಟನೆಗಳಿಗೆ ಸೇರ್ಪಡೆಗೊಳ್ಳಲು ಹಾಗೂ ದೇಶದ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ. ಇಸಿಸ್ ಉಗ್ರ ಸಂಘಟನೆ ಕಡೆಗೆ ಈ ವರೆಗೂ 67 ಯುವಕರು ಆಕರ್ಷಣೆಗೊಳಗಾಗಿದ್ದಾರೆ.

ದಾಳಿ ನಡೆಸಲು ಸಂಚು ರೂಪಿಸಿದ್ದ ಸಾಕಷ್ಟು ಯುವಕರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. ಈ ರೀತಿಯ ಬೆಳವಣಿಗೆಗಳನ್ನು ಗಮನದಲ್ಲಿರಿಸಿಟ್ಟುಕೊಂಡು ಸಾಕಷ್ಷು ಎಚ್ಚರಿಕೆಯಿಂದಿರಬೇಕಿದೆ. ಇಸಿಸ್ ಉಗ್ರ ಸಂಘಟನೆ ಕುರಿತಂತೆ ಇಂದು ವಿಶ್ವವೇ ತಲೆಕೆಡಿಸಿಕೊಂಡು ಕುಳಿತಿದೆ. ಭಾರತಕ್ಕೂ ಇಸಿಸ್ ದೊಡ್ಡ ಸವಾಲಾಗಿದೆ. ಆದರೆ, ಈ ಸವಾಲನ್ನು ಭಾರತದ ಎದುರಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

Comments are closed.