ರಾಷ್ಟ್ರೀಯ

ನ.30ರಿಂದ Anti-Smartphone ಮಾರುಕಟ್ಟೆಗೆ

Pinterest LinkedIn Tumblr

smart-phoneನವದೆಹಲಿ(ನ. 20): ಮಧ್ಯಮ ಹಾಗೂ ಮೇಲ್ಪಟ್ಟ ವರ್ಗದ ಬಹುತೇಕರ ವೈಯಕ್ತಿಕ ಬದುಕನ್ನು ಸ್ಮಾರ್ಟ್’ಫೋನ್ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಸ್ಮಾರ್ಟ್’ಫೋನ್’ನ ಬ್ಯಾಟರಿಯಂತೆ ಮನಸ್ಸಿನ ಶಾಂತಿಯೂ ಬೇಗಬೇಗ ಖಾಲಿಯಾಗುತ್ತಿದೆ. ಸ್ಮಾರ್ಟ್’ಫೋನ್ ತ್ಯಜಿಸಲೂ ಸಾಧ್ಯವಿಲ್ಲ; ಇಟ್ಟುಕೊಳ್ಳಲೂ ಸಾಧ್ಯವಿಲ್ಲ ಎಂಬಂತಾಗಿದೆ. ಇಂಥ ಸ್ಥಿತಿಯಲ್ಲಿ ಇದೀಗ ‘Anti-Smartphone’ ಎಂಬ ಹೊಸ ಟ್ರೆಂಡ್ ಸೃಷ್ಟಿಗೆ ವೇದಿಕೆ ಸಜ್ಜಾಗುತ್ತಿದೆ. ಸ್ಮಾರ್ಟ್’ಫೋನ್’ನ ಜಂಜಾಟವನ್ನು ಕಡಿಮೆ ಮಾಡಲೆಂದೇ ಆಂಟಿ-ಸ್ಮಾರ್ಟ್’ಫೋನ್’ಗಳನ್ನು ನಿರ್ಮಿಸುವ ಐಡಿಯಾಗಳು ಚಾಲನೆಯಲ್ಲಿವೆ. ಲೈಟ್’ಫೋನ್ ಎಂಬ ಪುಟ್ಟ ಸಂಸ್ಥೆ ಇಂಥದ್ದೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿ ಬಹಳ ದಿನವಾದರೂ ಮಾರುಕಟ್ಟೆಗೆ ಕಾಲಿಡಲು ಈಗ ಸಿದ್ಧವಾಗಿ ನಿಂತಿದೆ. ನವೆಂಬರ್ 30ರಿಂದ ಅದರ ಆಂಟಿ-ಸ್ಮಾರ್ಟ್’ಫೋನ್’ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದೆ ವಿಶೇಷ?
ಈ ಲೈಟ್’ಫೋನ್’ನ ಮಾರುಕಟ್ಟೆ ಬೆಲೆ 100 ಡಾಲರ್ (ಸುಮಾರು 7 ಸಾವಿರ ರೂ.). ನಿಮ್ಮಲ್ಲಿ ಈಗಾಗಲೇ ಇರುವ ಸ್ಮಾರ್ಟ್’ಫೋನ್’ಗೆ ಹೆಚ್ಚುವರಿಯಾಗಿ ಈ ಲೈಟ್ ಫೋನನ್ನು ಖರೀದಿಸಬೇಕಾಗುತ್ತದೆ. ನಿಮ್ಮ ಸ್ಮಾರ್ಟ್’ಫೋನ್’ಗೆ ಬರುವ ಕರೆಗಳು ಅಪ್ಲಿಕೇಶನ್’ವೊಂದರ ಸಹಾಯದಿಂದ ಈ ಲೈಟ್’ಫೋನ್’ಗೆ ವರ್ಗವಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಮೂರು ವಾರ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಈ ಲೈಟ್’ಫೋನು ಬಹುತೇಕ ಫೋನ್ ಕಾಲ್’ಗಷ್ಟೇ ಸೀಮಿತವಾಗಿರುತ್ತದೆ. ಇದರಲ್ಲಿ ಇಂಟರ್ನೆಟ್ ಇರುವುದಿಲ್ಲ. 2ಜಿ ನ್ಯಾನೋ ಸಿಮ್ ಕಾರ್ಡ್ ಹಾಕಬಹುದು. ಮೈಕ್ರೋಫೋನ್, ಮೈಕ್ರೋ ಯುಎಸ್’ಬಿ ಪೋರ್ಟ್ ಇದರಲ್ಲಿರುತ್ತದೆ.

Comments are closed.