ರಾಷ್ಟ್ರೀಯ

ರೈತರು ಹಳೆ 500 ನೋಟಿನಿಂದ ಬಿತ್ತನೆ ಬೀಜ ಕೊಳ್ಳಬಹುದು

Pinterest LinkedIn Tumblr

noteನವದೆಹಲಿ: ₹1000 ಮತ್ತು ₹500 ನೋಟು ರದ್ದತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತು ವ್ಯಾಪಾರಿಗಳಿಗೆ ಸರ್ಕಾರ ಹೊಸ ವ್ಯವಸ್ಥೆ ಘೋಷಿಸಿದೆ. ಈ ಮೂಲಕ ಹಳೆಯ 500 ಮುಖಬೆಲೆಯ ನೋಟು ನೀಡಿ ಅಗತ್ಯ ಬಿತ್ತನೆ ಬೀಜ ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಸೇರಿದ ಮಳಿಗೆ, ಘಟಕಗಳು, ರಾಷ್ಟ್ರೀಯ ಅಥವಾ ರಾಜ್ಯ ಬೀಜ ನಿಗಮಗಳು, ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಸೂಕ್ತ ಗುರುತಿನ ಆಧಾರ ನೀಡಿ ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ ಕೊಳ್ಳಬಹುದು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಹಳೆಯ ₹500 ಮುಖಬೆಲೆಯ ನೋಟುಗಳನ್ನು ಬೀಜ ಕೊಳ್ಳಲು ಬಳಸುವ ಅವಕಾಶ ಕಲ್ಪಿಸಲಾಗಿದ್ದು, ಈ ಮೂಲಕ ರಬಿ ಕಾಲದ ಬೆಳೆ ಬೆಳೆಯಲು ರೈತರಿಗೆ ಅಗತ್ಯ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ.

ಈ ಹಿಂದೆ ಪ್ರಕಟಿಸಿದಂತೆ ರೈತರು ತಮ್ಮ ಖಾತೆಯಿಂದ ವಾರಕ್ಕೆ ₹25,000 ವರೆಗೂ ನಗದು ಪಡೆದುಕೊಳ್ಳಲು ಅವಕಾಶವಿದೆ. ಇದರೊಂದಿಗೆ ಬೆಳೆ ವಿಮೆ ಪ್ರೀಮಿಯಂ ಪಾವತಿ ಕೊನೆಯ ದಿನವನ್ನು 15 ದಿನ ಮುಂದೂಡಲಾಗಿದೆ ಹಾಗೂ ಎಪಿಎಂಸಿ ನೋಂದಾಯಿತ ವ್ಯಾಪಾರಿಗಳು ಖಾತೆಯಿಂದ ವಾರಕ್ಕೆ ₹50,000 ತೆಗೆಯಲು ಅವಕಾಶ ನೀಡಲಾಗಿದೆ.

ಆರ್‌ಬಿಐ: ಓವರ್‌ಡ್ರಾಫ್ಟ್‌ ಮತ್ತು ನಗದು–ಸಾಲ(ಕ್ಯಾಷ್‌ ಕ್ರೆಡಿಟ್‌) ಖಾತೆದಾರರು ವಾರಕ್ಕೆ ₹50,000 ವರೆಗೂ ನಗದು ಪಡೆಯಲು ಆರ್‌ಬಿಐ ಅವಕಾಶ ನೀಡಿದೆ. ಈ ಎಲ್ಲ ವ್ಯವಸ್ಥೆ ನಡುವೆಯೂ ಸಾಮಾನ್ಯ ಜನರು ನೋಟು ಬದಲಾವಣೆ ಮತ್ತು ನಗದು ಪಡೆಯಲು ಬ್ಯಾಂಕ್‌, ಎಟಿಎಂಗಳ ಮುಂದೆ ಸರದಿಗಾಗಿ ಕಾಯುತ್ತಿರುವುದು ಮುಂದುವರಿದಿದೆ.

Comments are closed.