ರಾಷ್ಟ್ರೀಯ

ಹೊಸ ನೋಟಿನಲ್ಲಿ ದೇವನಾಗರಿ ಅಂಕಿಯನ್ನು ಪ್ರಶ್ನಿಸಿದ ಮದ್ರಾಸ್ ಹೈಕೋರ್ಟ್

Pinterest LinkedIn Tumblr

note1ಮದುರೈ: ಎರಡು ಸಾವಿರ ರೂಪಾಯಿಯ ಹೊಸ ನೋಟುಗಳ ಮೇಲೆ ಮೌಲ್ಯವನ್ನು ಯಾವ ಅಧಿಕಾರ ಬಳಸಿ ದೇವನಾಗರಿ ಅಂಕಿಗಳಲ್ಲಿ ಮುದ್ರಿಸಲಾಗಿದೆ ಎಂಬುದನ್ನು ಸ್ಪಷ್ಟ ಪಡಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಹಣಕಾಸು ಸಚಿವಾಲಯವನ್ನು ಕೇಳಿದೆ.

ಕೆಪಿಟಿ ಗಣೇಶನ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಸ್ಪಷ್ಟನೆ ಕೇಳಿದೆ. ಅರ್ಜಿದಾರರ ಪರ ವಕೀಲರು ದೇವನಾಗರಿ ಅಂಕಿಗಳಲ್ಲಿ ನೋಟಿನ ಮೌಲ್ಯವನ್ನು ಮುದ್ರಿಸಿರುವುದು ಸಂವಿಧಾನ ಬಾಹಿರ ಎಂದು ವಾದಿಸಿದ್ದರು.

ಸಂವಿಧಾನ 342ನೇ ವಿಧಿಯಂತೆ ನೋಟುಗಳ ಮೇಲೆ ಮುದ್ರಿಸಲಾಗುವ ಅಂಕಿಗಳು ಅಂತಾರಾಷ್ಟ್ರೀಯಗೊಂಡಿರುವ ಭಾರತೀಯ ಅಂಕಿಗಳಷ್ಟೇ ಆಗಿರಬೇಕು. ದೇವನಾಗರಿ ಅಂಕಿಗಳನ್ನು ಮುದ್ರಿಸಬೇಕಾದರೆ ಅದನ್ನು ಸಂಸತ್ತು ಒಪ್ಪಬೇಕಾಗುತ್ತದೆ. ಅಷ್ಟೇ ಅಲ್ಲ ಸಂವಿಧಾನ ಜಾರಿಗೆ ಬಂದ 15 ವರ್ಷಗಳ ಒಳಗೆ ರಾಷ್ಟ್ರಪತಿ ಈ ಬಗೆಯ ಅಂಕಿಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿರಬೇಕಿತ್ತು. ಅಂಥದ್ದೇನೂ ಈ ತನಕ ಆಗದೇ ಇರುವುದರಿಂದ ದೇವನಾಗರಿ ಅಂಕಿಗಳ ಬಳಕೆ ಅಸಾಂವಿಧಾನಿಕ ಎಂಬುದು ಅರ್ಜಿದಾರರು ವಾದವಾಗಿದೆ.

1963ರಲ್ಲಿ ಜಾರಿಗೆ ಬಂದ ಅಧಿಕೃತ ಭಾಷೆಗಳ ಕಾಯ್ದೆಯಲ್ಲೂ ದೇವನಾಗರಿ ಅಂಕಿಗಳ ಬಳಕೆಗೆ ಅವಕಾಶ ಕಲ್ಪಿಸಲಾಗಿಲ್ಲ. ಆದ್ದರಿಂದ ಈಗ ಮುದ್ರಿಸಲಾಗಿರುವ 2000 ರೂಪಾಯಿಗಳ ನೋಟುಗಳ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಸರ್ಕಾರಿ ವಕೀಲರು ಕೇಂದ್ರ ಹಣಕಾಸು ಸಚಿವಾಲಯದಿಂದ ಈ ಕುರಿತಂತೆ ಸ್ಪಷ್ಟನೆ ಒದಗಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.

Comments are closed.