ರಾಷ್ಟ್ರೀಯ

ನೋಟು ನಿಷೇಧ: ಊರ್ಜಿತ್ ಪಟೇಲ್ ರಾಜೀನಾಮೆಗೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಒತ್ತಾಯ

Pinterest LinkedIn Tumblr

Urjitಬೆಂಗಳೂರು: ನೋಟು ರದ್ಧತಿಯ ನಂತರ ಉಂಟಾದ ಗೊಂದಲ ಮತ್ತು ಐವತ್ತು ಮಂದಿಯ ಸಾವಿನ ಹೊಣೆ ಹೊತ್ತು ರಿಸರ್ವ್ ಬ್ಯಾಂಕ್ ಗವರ್ನರ್ ರಾಜೀನಾಮೆ ಸಲ್ಲಿಸಬೇಕೆಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಓಸಿ) ಆಗ್ರಹಿಸಿದೆ.

ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥರು ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಕೈಗೊಂಡ ನಿರ್ಧಾರದಿಂದ ಜನಸಾಮಾನ್ಯರ ನಿತ್ಯವೂ ಕಷ್ಟಪಡುವಂತಾಗಿದೆ ಅಷ್ಟೇ ರಾಷ್ಟ್ರದ ಆರ್ಥಿಕತೆಯೇ ಕುಸಿತದತ್ತ ಸಾಗುತ್ತಿದೆ ಎಂದು ಒಕ್ಕೂಟದ ಹಿರಿಯ ಉಪಾಧ್ಯಕ್ಷ ಡಾ.ಥಾಮಸ್ ಫ್ರಾಂಕೋ ಹೇಳಿದ್ದಾರೆ.

‘ಪ್ರಧಾನಿ ಮೋದಿಯವರಾಗಲೀ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಾಗಲೀ ಅರ್ಥಶಾಸ್ತ್ರಜ್ಞರಲ್ಲ. ಆದರೆ ರಿಸರ್ವ್ ಬ್ಯಾಂಕ್‌ನಲ್ಲಿರುವವರು ಅರ್ಥಶಾಸ್ತ್ರಜ್ಞರು. ಅವರಿಗೆ ಜನರ ಬದುಕಿನ ಮೇಲೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ವಿಚಾರಗಳನ್ನು ನಿರ್ಧರಿಸುವ ಸಾಮರ್ಥ್ಯವಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

1978ರಲ್ಲಿ ಜನತಾ ಸರ್ಕಾರ ನೋಟು ರದ್ದುಗೊಳಿಸುವ ನಿರ್ಧಾರ ಮಾಡಿದಾಗ ಅಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ಐ.ಜಿ.ಪಟೇಲ್ ಅವರು ಅದನ್ನು ವಿರೋಧಿಸಿದ್ದು ಎಂಬುದನ್ನು ಫ್ರಾಂಕೋ ನೆನಪಿಸಿದ್ದಾರೆ.

500 ಮತ್ತು 1000 ರೂಪಾಯಿಗಳ ನೋಟುಗಳನ್ನು ರದ್ದು ಪಡಿಸುವ ನಿರ್ಧಾರದ ಪರಿಣಾಮದ ಚರ್ಚೆಗಳು ಈ ತನಕವೂ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಕೇಂದ್ರೀಕರಿಸಿ ನಡೆಯುತ್ತಿತ್ತು. ಈಗ ಟೀಕಾಕಾರರು ಊರ್ಜಿತ್ ಪಟೇಲ್ ಅವರನ್ನು ತಮ್ಮ ಗುರಿಯಾಗಿಸಿಕೊಂಡಿರುವಂತಿದೆ.

ಕಳೆದ ಹದಿಮೂರು ದಿನಗಳಿಂದ ರಿಸರ್ವ್ ಬ್ಯಾಂಕ್‌ನ ಗವರ್ನರ್ ಜನಸಾಮಾನ್ಯರ ಕಷ್ಟಕ್ಕೆ ಸಂಬಂಧಿಸಿದಂತೆ ಒಂದು ಹೇಳಿಕೆಯನ್ನೂ ನೀಡಿಲ್ಲದೇ ಇರುವುದು ಅವರೆಷ್ಟು ಸ್ವತಂತ್ರರು ಎಂಬುದನ್ನು ಹೇಳುತ್ತಿದೆ ಎಂದು ಈಗಾಗಲೇ ಹಲವು ವಿಶ್ಲೇಷಕರು ಬೊಟ್ಟು ಮಾಡಿದ್ದಾರೆ. ಇದೀಗ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವೂ ಊರ್ಜಿತ್ ಪಟೇಲ್‌ರನ್ನೇ ಗುರಿಯಾಗಿಟ್ಟುಕೊಂಡು ಬಾಣ ಬಿಡಲು ಆರಂಭಿಸಿದೆ.

Comments are closed.