ರಾಷ್ಟ್ರೀಯ

ಮದುವೆ ಸಮಾರಂಭಗಳಿಗೆ 2.5 ಲಕ್ಷ ರೂ. ವ್ಯವಸ್ಥೆ ಕಲ್ಪಿಸಿದ ಕೇಂದ್ರ

Pinterest LinkedIn Tumblr

marriageನವದೆಹಲಿ, ನ. ೧೭ – ಒಂದು ಸಾವಿರ ಹಾಗೂ ಐನೂರು ರೂಪಾಯಿ ನೋಟುಗಳ ರದ್ದತಿಯಿಂದ ಜನರ ಬವಣೆಯನ್ನು ತಪ್ಪಿಸಲು ಕೆಲ ಪರಿಹಾರ ಕ್ರಮಗಳನ್ನು ಪ್ರಕಟಿಸಿರುವ ಕೇಂದ್ರ ಸರ್ಕಾರ, ಮದುವೆ ಸಮಾರಂಭ ಇರುವ ಕುಟುಂಬಗಳು ತಮ್ಮ ಖಾತೆಯಿಂದ 2.5 ಲಕ್ಷ ರೂ. ಹಣವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಜೊತೆಗೆ ರೈತರಿಗೆ ಪ್ರತಿ ವಾರ 25 ಸಾವಿರ ರೂಪಾಯಿ ಹಣವನ್ನು ಹಿಂಪಡೆಯಲು ಹಾಗೂ ಸಗಟು ವ್ಯಾಪಾರಿಗಳಿಗೆ ಪ್ರತಿವಾರ 50 ಸಾವಿರ ರೂ.ಗಳನ್ನು ಖಾತೆಯಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಜನ ಬ್ಯಾಂಕಿನಲ್ಲಿ ನಗದು ವಿನಿಮಯ ಮಾಡಿಕೊಳ್ಳುವ ಹಣವನ್ನು 4,500 ರೂ. ನಿಂದ 2000 ರೂ.ಗಳಿಗೆ ಇಳಿಕೆ ಮಾಡಿ ಖಾತೆಯಿಂದಲೇ ಹಣ ಪಡೆಯುವ ವ್ಯವಸ್ಥೆಗೆ ಒತ್ತು ನೀಡಿದೆ.

ರೈತರ ಖಾತೆಗೆ ಮಂಜೂರಾಗಿರುವ ಬೆಳೆ ಸಾಲದಲ್ಲಿ ಪ್ರತಿವಾರ 25,000 ರೂ.ಗಳನ್ನು ಪಡೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿ ಕಾಂತದಾಸ್ ಹೇಳಿದರು.

ಹಣ ಪಡೆಯುವ ರೈತರ ಖಾತೆಗಳು ಅವರ ಹೆಸರಿನಲ್ಲಿಯೇ ಇರಬೇಕು. ಜೊತೆಗೆ ಕೃಷಿ ಸಾಲ ಪಡೆದಿರಬೇಕು. ಆಗ ಮಾತ್ರ ರೈತರು ಖಾತೆಯಿಂದ 25,000 ರೂ. ಪಡೆಯಬಹುದಾಗಿದೆ.

ಮದುವೆ ಸಮಾರಂಭ ನಡೆಸುವವರಿಗೆ ನೋಟು ರದ್ದತಿ ಭಾರಿ ತೊಂದರೆ ತಂದಿತ್ತು. ಹೆಚ್ಚಿನ ಹಣ ಖಾತೆಯಿಂದ ಪಡೆಯಲಾಗದೆ ಮದುವೆ ಇದ್ದ ಕುಟುಂಬಗಳು ತೊಂದರೆಗೆ ಸಿಲುಕಿದ್ದವು. ಈ ಸಮಸ್ಯೆಯನ್ನು ಪರಿಹರಿಸಲು ಮದುವೆ ಇರುವ ಕುಟುಂಬಗಳಿಗೆ ಒಂದೇ ಸಲಕ್ಕೆ 2.5 ಲಕ್ಷ ರೂ.ಗಳನ್ನು ಖಾತೆಯಿಂದ ಪಡೆಯಲು ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಇಂದು ಆದೇಶ ನೀಡಿದೆ.

ಹಳೇ ನೋಟಿಗೆ ಹೊಸ ನೋಟು ಪಡೆಯಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ಜನ ನಿಲ್ಲುವುದಕ್ಕೆ ಕಡಿವಾಣ ಹಾಕಿ ಖಾತೆಯಿಂದಲೇ ಹಣ ಪಡೆಯುವುದಕ್ಕೆ ಒತ್ತು ನೀಡುವ ಸಲುವಾಗಿ ಹಾಗೂ ಹಣ ವಿನಿಮಯದ ಅವಕಾಶವನ್ನು ಕಾಳಧನಿಕರು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದನ್ನು ತಪ್ಪಿಸಲು ಹಣ ವಿನಿಮಯದ ಪ್ರಮಾಣವನ್ನು 4,500 ರೂ.ಗಳಿಂದ 2000 ರೂ.ಗಳಿಗೆ ಇಳಿಕೆ ಮಾಡಿ ಕಾಳಧನಿಕರ ತಂತ್ರಗಳಿಗೆ ಸರ್ಕಾರ ತಿರುಗೇಟು ನೀಡಿದೆ.

ನೋಟು ರದ್ದತಿ ನಂತರ ಹಣ ವಿನಿಮಯ ಮಾಡಿಕೊಳ್ಳಲು ಜನತೆ ಬ್ಯಾಂಕ್‌ನಲ್ಲಿ ಉದ್ದನೆಯ ಸರದಿ ಸಾಲಿನಲ್ಲಿ ನಿಂತು ಪರದಾಡುವುದು ತಪ್ಪಿಲ್ಲವಾದರೂ, ಹೊಸ ವ್ಯವಸ್ಥೆಗೆ ಜನತೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರ ನೋಟು ರದ್ದತಿ ನಿರ್ಧಾರದ ಬಗ್ಗೆ ಸಾಮಾನ್ಯ ಜನ ಆಕ್ರೋಶವಾಗಲಿ, ಅಸಮಾಧಾನವಾಗಲಿ ವ್ಯಕ್ತಪಡಿಸಿಲ್ಲ. ಅದರ ಬದಲಿಗೆ ಬಹುತೇಕರಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ನೋಟು ರದ್ದತಿ ನಂತರ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗೊಂದಲಗಳು ಉಂಟಾಗಿ ಜನತೆಗೆ ನೋಟು ವಿನಿಮಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೂ ಜನ ಎಲ್ಲೂ ತಾಳ್ಮೆ ಕಳೆದುಕೊಂಡಿಲ್ಲ. ನೋಟು ರದ್ದತಿಗೂ ಮೊದಲು ಸರಿಯಾದ ಸಿದ್ಧತೆ ಮಾಡಬೇಕಿತ್ತು ಎಂಬ ಗೊಣಗಾಟ ಬಿಟ್ಟಿರೇ ತೀರ್ಮಾನದ ಬಗ್ಗೆ ವಿರೋಧ ವ್ಯಕ್ತವಾಗಿಲ್ಲ.

ಪ್ರತಿ ಪಕ್ಷಗಳು ಸಹ ನೋಟು ರದ್ದತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಸಿದ್ಧತೆ ಇಲ್ಲದ ತೀರ್ಮಾನದಿಂದ ಜನ ತೊಂದೆರೆಗೆ ಸಿಲುಕಿರುವ ಬಗ್ಗೆ ತಕರಾರು ತೆಗೆದಿದೆ. ಯಾವ ಪ್ರತಿಪಕ್ಷ ಮುಖಂಡರು ನೋಟು ರದ್ದತಿ ತೀರ್ಮಾನ ಕೈಬಿಡುವಂತೆ ಒತ್ತಾಯಿಸಿಲ್ಲ. ಕಾರಣ ನೋಟು ರದ್ದತಿ ತೀರ್ಮಾನದ ಬಗ್ಗೆ ಬಡವರು, ಮಧ್ಯಮ ವರ್ಗದವರ ಮೆಚ್ಚುಗೆಯ ಮಾತುಗಳು, ಕಾಳಧನಿಕರ ಕಪ್ಪುಹಣ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಉತ್ತಮ ತೀರ್ಮಾನ ಮಾಡಿದ್ದಾರೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

ಪ್ರಧಾನಿ ಮೋದಿಯವರ ತೀರ್ಮಾನದಿಂದ ನಿಜಕ್ಕೂ ಕಾಳಧನಿಕರು ಕಂಗಾಲಾಗಿದ್ದಾರೆ. ಕಪ್ಪುಹಣವನ್ನು ಪರಿವರ್ತಿಸಲು ದಾರಿ ಕಾಣದೆ ಕಂಗಾಲಾಗಿದ್ದಾರೆ. ಆರಂಭದಲ್ಲಿ ಕಪ್ಪುಹಣ ಪರಿವರ್ತನೆಗೆ ದಾರಿ ಸಿಗಬಹುದು ಅಂದುಕೊಂಡಿದ್ದ ಅಕ್ರಮ ಸಂಪತ್ತು ಹೊಂದಿರುವವರು, ಹಣವಿನಿಮಯ ಸಂದರ್ಭದಲ್ಲಿ ಬೆರಳಿಗೆ ಶಾಹಿ ಹಾಕುವ ತೀರ್ಮಾನದ ನಂತರ ಅಕ್ಷರಶಃ ಚಿಂತಾಕ್ರಾಂತರಾಗಿದ್ದಾರೆ.

ಬಡವರ ಮೂಲಕ ಕಪ್ಪುಹಣವನ್ನು ಪರಿವರ್ತಿಸುವ ಕೆಲಸಕ್ಕೆ ಬೆರಳಿಗೆ ಇಂಕ್ ಹಾಕುವ ತೀರ್ಮಾನ ದೊಡ್ಡ ಹೊಡೆತ ನೀಡಿದೆ. ಸಾಮಾನ್ಯರು ಮುಂದೆ ತೊಂದರೆ ಎದುರಾಗಬಹುದು ಎಂಬ ಕಾರಣಕ್ಕೆ ಶ್ರೀಮಂತರ ಹಣ ಪರಿವರ್ತಿಸುವ `ರಿಸ್ಕ್’ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ಕಾಳಧನಿಕರ ನಿದ್ದೆಗೆಡಿಸಿವೆ.

ವಿಶ್ರಾಂತಿ ಇಲ್ಲದ ಬ್ಯಾಂಕ್ ನೌಕರರು; ಕರಗದ ಸಾಲು

ನೋಟು ರದ್ದತಿ ತೀರ್ಮಾನ ಹೊರಬಿದ್ದು 9 ದಿನ ಕಳೆದಿವೆ. ಬ್ಯಾಂಕ್ ಮುಂದೆ ಜನರ ದೊಡ್ಡ ಸರದಿ ಸಾಲು ಕರಗಿಲ್ಲ. ಹಣ ವಿನಿಮಯಕ್ಕೆ ಜನರ ಬವಣೆ ಇನ್ನೂ ತಪ್ಪಿಲ್ಲ.

ಬ್ಯಾಂಕ್ ನೌಕರರಂತೂ ಹೈರಾಣಾಗಿ ಹೋಗಿದ್ದಾರೆ.. ರಜಾ ದಿನಗಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಶನಿವಾರ, ಭಾನುವಾರ ಕೆಲಸ ಮಾಡಿದ್ದ ಬ್ಯಾಂಕ್ ನೌಕರರು ಸಾರ್ವತ್ರಿಕ ರಜಾ ದಿನವಾದ ಇಂದೂ ಸಹ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ.

ರಜಾ ದಿನವಾದ ಇಂದು ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ತುಸು ಹೆಚ್ಚು ಎಂಬಂತೆ ಜನರ ಸಾಲು ಇದೆ.

ಎಟಿಎಂಗಳಲ್ಲಿ ಹೊಸ ಐನೂರು ನೋಟುಗಳು ಬರುವಂತಾದರೆ ಸ್ವಲ್ಪ ಮಟ್ಟಿಗೆ ಜನರ ಬವಣೆ ಕಡಿಮೆಯಾಗಬಹುದು. ಏನೇ ಆಗಲಿ ತೊಂದರೆ, ತಾಪತ್ರಯ. ಪಡಿಪಾಟಲು ನಡುವೆಯೇ ಜನ ಹೊಸ ವ್ಯವಸ್ಥೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿರುವುದು ನಿಜ.

ನೋಟುಗಳ ಚಲಾವಣೆಗೆ ಪದೇ ಪದೇ ಬ್ಯಾಂಕ್‌ಗಳಿಗೆ ಬರುತ್ತಿದ್ದ ಜನರನ್ನು ತಡೆಯಲು ಅಳಿಸಲಾಗದ ಶಾಹಿ ಹಚ್ಚಲು ಬ್ಯಾಂಕುಗಳು ಪ್ರಾರಂಭ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮುಂದೆ ನಿಲ್ಲುತ್ತಿದ್ದ ಜನರ ಸಾಲು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಕಾಳಧನಿಕರ ಹಣ ಬದಲಾವಣೆಗೆ ಜನರನ್ನು ಬ್ಯಾಂಕ್‌ಗಳ ಮುಂದೆ ನಿಲ್ಲಿಸುತ್ತಿದ್ದ ಧೋರಣೆಗೆ ಕಡಿವಾಣ ಹಾಕಲು ಒಮ್ಮೆ ಹಣ ಪಡೆದವರ ಬಲಗೈ ತೋರು ಬೆರಳಿಗೆ ಶಾಹಿ ಹಚ್ಚುವ ಕೆಲಸ ನಿನ್ನೆಯಿಂದ ಪ್ರಾರಂಭವಾಗಿದೆ. ಇದರಿಂದಾಗಿ ಪದೇ ಪದೇ ಬ್ಯಾಂಕ್‌ಗಳತ್ತ ಬರುತ್ತಿದ್ದ ಜನರ ಸಂಖ್ಯೆ ಕಡಿಮೆಯಾಗಿದೆ.

Comments are closed.