ರಾಷ್ಟ್ರೀಯ

ದೇಶದ ಹಿತಕ್ಕಾಗಿ ನೋಟು ರದ್ದು ನಿರ್ಧಾರ: ಪೀಯೂಷ್ ಗೋಯಲ್

Pinterest LinkedIn Tumblr

piyush-goyalನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರವನ್ನು ಟೀಕಿಸಿದ ವಿಪಕ್ಷಗಳಿಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಸರ್ಕಾರ, ಜನ ಹಿತಕ್ಕಾಗಿ ನೋಟು ರದ್ದು ಮಾಡಲಾಗಿದೆ ಎಂದಿದೆ.

ದೇಶದ ಒಳಿತಿಗಾಗಿ ಕಪ್ಪು ಹಣವನ್ನು ನಿರ್ಮೂಲನೆ ಮಾಡಲೇಬೇಕು. ಈ ಕಪ್ಪು ಹಣ ದೇಶದಲ್ಲಿ ಭಯೋತ್ಪಾದನೆಗೆ ಬಳಕೆಯಾಗುತ್ತಿದೆ. ಆದ್ದರಿಂದ ನೋಟು ರದ್ದು ಮಾಡಿದ್ದು ದೇಶದ ಹಿತ ದೃಷ್ಟಿಯಿಂದ ಎಂದು ಕೇಂದ್ರ ಇಂಧನ ಖಾತೆ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ನೋಟು ರದ್ದು ವಿಚಾರ ಚರ್ಚೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿಯವರು ನಿರ್ಧಾರ ಪ್ರಕಟ ಮಾಡುವ ಮುನ್ನ ಆ ಮಾಹಿತಿಯನ್ನು ಸೋರಿಕೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಶರ್ಮಾ ಅವರ ಆರೋಪಕ್ಕೆ ಪ್ರತ್ರಿಕ್ರಿಯಿಸಿದ ಗೋಯಲ್, ನೋಟು ರದ್ದು ವಿಚಾರದಲ್ಲಿ ಯಾವುದೇ ರಾಜಕೀಯ ನಡೆಸಿಲ್ಲ. ದೇಶದ ಹಿತಕ್ಕಾಗಿ ಈ ನಡೆಯನ್ನು ಸ್ವೀಕರಿಸಲಾಗಿದೆ. ದೇಶದಲ್ಲಿರುವ ಕಪ್ಪುಹಣವನ್ನು ಹೋಗಲಾಡಿಸುವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಧೈರ್ಯ ಇರುವುದು ಬಿಜೆಪಿ ಸರ್ಕಾರಕ್ಕೆ ಮತ್ತು ನರೇಂದ್ರ ಮೋದಿಯವರಿಗೆ ಮಾತ್ರ.

ಮೋದಿಯವರ ಈ ನಿರ್ಧಾರವನ್ನು ದೇಶದ ಜನತೆ ಸ್ವಾಗತಿಸಿದ್ದಾರೆ. ಕಪ್ಪು ಹಣ ಹೊಂದಿರುವವರು ಮಾತ್ರ ಚಿಂತೆಗೊಳಗಾಗಿದ್ದಾರೆ. ನೋಟು ರದ್ದು ನಿರ್ಧಾರದಿಂದಾಗಿ ದೇಶದಲ್ಲಿರುವ ಪ್ರಾಮಾಣಿಕರಿಗೆ ಗೌರವ ಲಭಿಸಿದೆ. ಅಪ್ರಾಮಾಣಿಕರಿಗೆ ನಷ್ಟವುಂಟಾಗಿದೆ.

ನೋಟು ಚಲಾವಣೆ ರದ್ದು ಮಾಡುವ ತೀರ್ಮಾನವನ್ನು ರಹಸ್ಯವಾಗಿ ಇರಿಸಿದ್ದರಿಂದ, ಸಾರ್ವಜನಿಕರಿಗೆ ಕೆಲವು ದಿನ ಸಮಸ್ಯೆಯಾಗಿರಬಹುದು. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಒಂದು ರೂಪಾಯಿ ಕೂಡಾ ನಷ್ಟವಾಗಲ್ಲ. ಭ್ರಷ್ಟಾಚಾರದ ಮೂಲಕ ಸಂಪತ್ತು ಕೂಡಿಟ್ಟವರಿಗೆ ಮತ್ತು ಕಪ್ಪು ಹಣ ಹೊಂದಿದವರಿಗೆ ಮಾತ್ರ ನಷ್ಟವುಂಟಾಗಿದೆ. ಸರ್ಕಾರದ ಈ ನಡೆಯನ್ನು ದೇಶದ ಜನರು ಬೆಂಬಲಿಸಿದ್ದಾರೆ ಎಂದು ಗೋಯಲ್, ಸರ್ಕಾರದ ನಡೆಯನ್ನು ಸಮರ್ಥಿಸಿದ್ದಾರೆ.

Comments are closed.