ರಾಷ್ಟ್ರೀಯ

ಕಾಳಸಂತೆಕೋರರಿಗೆ ಮತ್ತೊಂದು ಆಘಾತ: ಚುನಾವಣೆಯಲ್ಲಿ ಬಳಸುವ ಇಂಕ್ ಬಳಕೆ

Pinterest LinkedIn Tumblr

inkನವದೆಹಲಿ, ನ. ೧೫ – ಕಾಳಧನಿಕರು ಬಚ್ಚಿಟ್ಟಿದ್ದ ಕಪ್ಪು ಹಣಕ್ಕೆ ಕಡಿವಾಣ ಹಾಕಲು ದಿಢೀರನೆ 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನೇ ರದ್ದು ಮಾಡಿ ಆಘಾತ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಬಾರಿ ಬ್ಯಾಂಕ್‌ಗಳಿಂದ ಹಣ ಬದಲಾವಣೆ ಮಾಡಿದವರ ಕೈ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲು ನಿರ್ಧರಿಸಿದೆ.

ಚುನಾವಣೆಯ ಸಂದರ್ಭದಲ್ಲಿ ಕೈ ಬೆರಳಿನ ಮೇಲೆ ಹಾಕುವಂತಹ ಇಂಕನ್ನು ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆ ಮಾಡಿಕೊಂಡವರ ಬೆರಳಿಗೆ ಹಾಕಲು ನಿರ್ಧರಿಸಿರುವುದರಿಂದ ಇನ್ನು ಮುಂದೆ ಕಪ್ಪು ಹಣವನ್ನು ಯಾವುದೇ ಮೂಲದಿಂದಲೂ ಬದಲಾವಣೆ ಮಾಡಿಕೊಳ್ಳಲು ಮುಂದಾದವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

500 ಹಾಗೂ 1000 ರೂ. ನೋಟು ರದ್ದು ಮಾಡಿರುವುದರಿಂದ ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಹಾಗೂ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಕಳೆದೊಂದು ವಾರದಿಂದ ಜನ ಸರದಿ ಸಾಲಿನಲ್ಲಿ ನಿಂತು ಬವಣೆಪಡುತ್ತಿರುವ ಹಿನ್ನೆಲೆಯಲ್ಲಿ ಸರದಿ ಸಾಲಿಗೆ ಕಡಿವಾಣ ಹಾಕಲು ಹಾಗೂ ಎಲ್ಲರಿಗೂ ಹಣ ದೊರೆಯುವಂತಾಗಲು ಕೇಂದ್ರ ಸರ್ಕಾರ ಇಂತಹದೊಂದು ನಿರ್ಧಾರ ಕೈಗೊಂಡಿದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಥಿಕ ವ್ಯವಹಾರಗಳ ಸಮಿತಿಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಹಣ ಪಡೆದ ಮಂದಿ ಮತ್ತೆ ಮತ್ತೆ ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಹಣ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕರಿಗೆ ಹಣ ಸಿಗದಂತಹ ಸಮಸ್ಯೆ ಎದುರಾಗಿದೆ. ಇಂತಹುದನ್ನು ತಡೆಗಟ್ಟಲು ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆ ಮಾಡಿದರೆ ಅವರ ಕೈಬೆರಳಿಗೆ ಶಾಯಿ ಹಾಕಲು ನಿರ್ಧರಿಸಲಾಗಿದೆ. ಇದರಿಂದಾಗಿ ಕಪ್ಪು ಹಣ ಹೊಂದಿರುವವರಿಗೆ ಮತ್ತಷ್ಟು ತೊಂದರೆಯಾಗಲಿದೆ ಎಂದರು.

ಬೇರೆಯವರ ಹಣ ತಂದು ಬದಲಾವಣೆ ಮಾಡಿಕೊಳ್ಳುವವರೂ ಈ ಹೊಸ ಪದ್ಧತಿಯಿಂದ ಸಿಕ್ಕಿ ಹಾಕಿಕೊಳ್ಳಲಿದ್ದಾರೆ. ಅಲ್ಲದೆ, ಮೋಸ ಮಾಡುವುದು ಪದೇ ಪದೇ ಹಣ ಬದಲಾವಣೆ ಮಾಡಲು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳ ಮುಂದೆ ಬಂದು ನಿಲ್ಲುವುದು ತಪ್ಪಲಿದೆ ಎಂದು ಹೇಳಿದರು.

ಜನ-ಧನ ಖಾತೆಗೆ ಕಳೆದೊಂದು ವಾರದಿಂದ ಹೆಚ್ಚಿನ ಹಣ ಜಮೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ತೀವ್ರ ನಿಗಾ ಇಟ್ಟಿದೆ. ಇದಕ್ಕಾಗಿಯೇ ಟಾಸ್ಕ್‌ಫೋರ್ಸ್ ಕೂಡ ರಚಿಸಲಾಗಿದೆ. ಜನ-ಧನ ಖಾತೆಯಲ್ಲಿ ಕನಿಷ್ಟ 50 ಸಾವಿರ ರೂ.ಗಳನ್ನಷ್ಟೇ ಠೇವಣಿ ಮಾಡಲು ಸಾಧ್ಯ ಅದಕ್ಕಿಂತ ಹೆಚ್ಚಿನ ಹಣ ಠೇವಣಿ ಮಾಡಿದರೆ ಅಂತಹವರ ಮೇಲೆ ನಿಗಾ ಇರಿಸಿ ತಪ್ಪಿತಸ್ಥರು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬ್ಯಾಂಕ್‌ಗಳಲ್ಲಿ ಹಾಗೂ ಅಂಚೆ ಕಚೇರಿಗಳಲ್ಲಿ ಹಣ ಬದಲಾವಣೆಗೆ ಅಗತ್ಯವಿರುವಷ್ಟು ನಗದು ಕೇಂದ್ರ ಸರ್ಕಾರದ ಬಳಿ ಇದೆ. ಇದಕ್ಕಾಗಿ ವದಂತಿಗಳಿಗೆ ಜನಸಾಮಾನ್ಯರು ಕಿವಿಗೊಡಬಾರದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳು ಬಿತ್ತರವಾಗುತ್ತಿದ್ದು, ಅವುಗಳ ಕಡೆಗಂತೂ ಗಮನ ಹರಿಸಬೇಡಿ ಮತ್ತು ಯಾರೊಬ್ಬರು ಭಯಪಡಬೇಡಿ ನಮ್ಮಲ್ಲಿ ಅಗತ್ಯವಿರುವಷ್ಟು ದುಡ್ಡಿದೆ ಎಂದು ಅವರು ಭರವಸೆ ನೀಡಿದ್ದಾರೆ.

ದೇಶದಲ್ಲಿ ಉಪ್ಪಿನ ಬೆಲೆ ಗಗನಮುಖಿಯಾಗಿದೆ. ಉಪ್ಪು ಸಿಗುತ್ತಿಲ್ಲ ಎನ್ನುವ ವದಂತಿಗಳಿಗೂ ಜನರು ಕಿವಿಗೊಡಬಾರದು ಎಂದು ಅವರು ನಿನ್ನೆ ರಾತ್ರಿ ಪ್ರಧಾನಿ ನರೇಂದ್ರಮೋದಿ ಹಣ ಬದಲಾವಣೆ ಸೇರಿದಂತೆ 500 ಹಾಗೂ 1000 ರೂ. ಬದಲಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಅನೇಕ ಸಲಹೆ ಸೂಚನೆ ನೀಡಿದ್ದಾರೆ ಎಂದರು.

ನಾಳೆ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, `ಹಣ ರದ್ಧತಿ ವಿಷಯದಲ್ಲಿ ದೇಶ ನಮ್ಮೊಂದಿಗಿದೆ, ನಾವು ನಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆಯಿಲ್ಲ’ ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ಹೇಳಿದ್ದಾರೆ.

ಇದಕ್ಕೆ ಮುನ್ನ ಅವರು ಹಣದ ಬಿಕ್ಕಟ್ಟು ಬಗೆಹರಿಯಲು ಇನ್ನಷ್ಟು ಕಾಲ ನೀಡುವಂತೆ ಜನತೆಗೆ ಮೋದಿ ಮನವಿ ಮಾಡಿದ್ದರು.

ಹಣದ ಬಿಕ್ಕಟ್ಟಿನ ಪರಿಹಾರದ ಹಾದಿಯಲ್ಲಿ ವಾರಕ್ಕೆ 20,000 ರೂ. ಹಿಂಪಡೆಯುವ ಮಿತಿಯನ್ನು 24,000 ರೂ.ಗಳಿಗೆ ಸರ್ಕಾರ ಏರಿಸಿದೆ.

ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬ್ಯಾಂಕಿಂಗ್ ಏಜಂಟರಿಗೆ ಹೆಚ್ಚು ಹಣ ಕೊಂಡೊಯ್ಯುವಂತೆ ಹೇಳಲಾಗಿದ್ದು, ಇದರಿಂದ ಗ್ರಾಮೀಣ ಜನತೆಗೆ ಹೆಚ್ಚಿನ ಬ್ಯಾಂಕಿಂಗ್ ಸೌಲಭ್ಯ ಲಭ್ಯವಾಗಲಿದೆ.

ನವೆಂಬರ್ 24ರ ವರೆಗೆ ಸರ್ಕಾರೀ ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಟೋಲ್‌ಬೂತ್ ಮತ್ತಿತರ ಅವಶ್ಯಕ ಸೇವೆಗಳಿಗೆ ಹಳೇ (500, 1000 ರೂ.) ನೋಟುಗಳನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ.

Comments are closed.