ರಾಷ್ಟ್ರೀಯ

ನೋಟು ರದ್ದು ವಿಚಾರ: ಬಿಜೆಪಿ ವಿರೋಧಿ ಒಕ್ಕೂಟಗಳೊಂದಿಗೆ ಕೈ ಜೋಡಿಸಲು ಮಮತಾ ಸಿದ್ಧತೆ

Pinterest LinkedIn Tumblr

Mamata_PTIaನವದೆಹಲಿ: ನೋಟು ರದ್ದು ತೀರ್ಮಾನವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳಬೇಕೆಂದು ವಿಪಕ್ಷಗಳು ಒತ್ತಾಯಿಸತೊಡಗಿವೆ. ಹಣ ಪಡೆಯುವುದಕ್ಕಾಗಿ ಬ್ಯಾಂಕ್ ಮತ್ತು ಎಟಿಎಂ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಜನ ಸಾಮಾನ್ಯರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನೋಟು ರದ್ದು ನಿರ್ಧಾರನ್ನು ಮೋದಿಯವರು ವಾಪಸ್ ಪಡೆಯಬೇಕೆಂದು ಬಿಜೆಪಿಯ ವಿರೋಧ ಪಕ್ಷಗಳು ಒಕ್ಕೊರಲಿನಿಂದ ಹೇಳಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ವಿರುದ್ಧದ ಸಮರಕ್ಕೆ ಕೈಜೋಡಿಸಲು ಸಿದ್ಧತೆ ನಡೆಸಿದ್ದಾರೆ.

ಎನ್‍ಡಿಎ ವಿರುದ್ಧದ ಈ ಹೋರಾಟದಲ್ಲಿ ಟಿಎಂಸಿಯ ವಿರೋಧ ಪಕ್ಷವಾದ ಸಿಪಿಎಂ ಭಾಗಿಯಾಗಿದ್ದರೂ, ಜನಹಿತದೃಷ್ಟಿಯಿಂದ ಈ ಹೋರಾಟದಲ್ಲಿ ಪಾಲ್ಗೊಳ್ಳಲು ಟಿಎಂಸಿ ನಿರ್ಧರಿಸಿದೆ.

ಇಂದು ಘಾಜಿಯಾಬಾದ್‍ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನೋಟು ರದ್ದು ನಿರ್ಧಾರದಿಂದಾಗಿ ಬಡವರು ಸುಖವಾಗಿ ನಿದ್ರಿಸುತ್ತಿದ್ದಾರೆ ಎಂದು ಹೇಳಿದ್ದರು, ಪ್ರಧಾನಿಯವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿರುವ ಮಮತಾ, ಮೋದಿಯವರು ಸಾಮಾನ್ಯ ಜನರನ್ನು ಅವಮಾನಿಸಿದ್ದಾರೆ. ಈ ರೀತಿ ಜನ ಸಾಮಾನ್ಯರನ್ನು ಅವಮಾನಿಸಬೇಡಿ. ಇದು ನನ್ನ ವಿನಂತಿ ಎಂದು ಸರಣಿ ಟ್ವೀಟ್ ಮೂಲಕ ಮಮತಾ ಹೇಳಿದ್ದಾರೆ.

ನೋಟು ರದ್ದು ನಿರ್ಧಾರವು ಸಾಮಾನ್ಯ ಜನರಿಗೆ ಹೊಡೆತ ನೀಡಿದೆ. ರು. 1.5 ಲಕ್ಷ ಕೋಟಿ ಜಿಡಿಪಿ ಈ 6 ದಿನಗಳಲ್ಲಿ ಕುಸಿದಿದೆ ಎಂದು ಮಮತಾ ಹೇಳಿದ್ದಾರೆ.

ಬಿಜೆಪಿ ವಿರುದ್ಧ ನಿಲ್ಲುವುದಕ್ಕಾಗಿ ಮಮತಾ ಅವರು ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್, ಆರ್‍ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೇರಿದಂತೆ ವಿಪಕ್ಷದ ಎಲ್ಲ ನೇತಾರರೊಂದಿಗೆ ಸಂವಹನ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

Comments are closed.