ರಾಷ್ಟ್ರೀಯ

1962ರ ಯುದ್ಧದ ವೇಳೆ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಚೀನೀ ಸೈನಿಕ!

Pinterest LinkedIn Tumblr

wang-qi_ನವದೆಹಲಿ(ಅ. 28): 1962ರಲ್ಲಿ ಭಾರತದ ವಿರುದ್ಧ ಯುದ್ಧಕ್ಕೆಂದು ಬಂದು ದಾರಿ ತಪ್ಪಿಸಿಕೊಂಡು ಭಾರತೀಯನೇ ಆಗಿಹೋಗಿರುವ ಚೀನಾದ ಸೈನಿಕರೊಬ್ಬರು ಈಗ ಚೀನಾಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಅನೇಕ ವರ್ಷಗಳಿಂದಲೂ ಇವರ ತವರಿಗೆ ಮರಳುವ ಸಂಕಲ್ಪ ಕೈಗೂಡುತ್ತಿಲ್ಲ. ಈಗ ಮೋದಿ ಸರಕಾರದಿಂದ ತನಗೆ ಆ ಭಾಗ್ಯ ಸಿಗಬಹುದೆಂಬ ಆಸೆಗಣ್ಣಿನಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ 77 ವರ್ಷದ ವ್ಯಾಂಗ್ ಕೀ.
ವ್ಯಾಂಗ್ ಕೀ ಅವರ ಪುತ್ರ ವಿಷ್ಣು ವ್ಯಾಂಗ್ ಹೇಳುವ ಪ್ರಕಾರ, ಅವರ ತಂದೆ 1960ರಲ್ಲಿ ಚೀನಾದ ಸೇನೆ ಸೇರಿದ್ದಾರೆ. 1962ರ ಯುದ್ಧದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ನಡೆಸಲು ಚೀನೀ ಸೇನೆಯೊಂದಿಗೆ ಪೂರ್ವದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದ್ದಾರೆ. ಆದರೆ ರಾತ್ರಿಯ ವೇಳೆ ದಾರಿ ತಪ್ಪಿಸಿಕೊಂಡಿದ್ದಾರೆ. ಅಸ್ಸಾಮ್’ನಲ್ಲಿ ಅಲೆದಾಡುತ್ತಿದ್ದ ಅವರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರ ಕಣ್ಣಿಗೆ ಬೀಳುತ್ತಾರೆ. 1963ರ ಜ.1ರಂದು ವ್ಯಾಂಗ್ ಕೀ ಅವರನ್ನು ಭಾರತೀಯ ಸೇನೆಯ ವಶಕ್ಕೆ ಒಪ್ಪಿಸಲಾಗುತ್ತದೆ. ಅಸ್ಸಾಮ್, ಅಜ್ಮೇರ್, ದಿಲ್ಲಿ ಮತ್ತು ಪಂಜಾಬ್’ನ ವಿವಿಧ ಜೈಲುಗಳಲ್ಲಿ ವ್ಯಾಂಗ್ ಕೀ ಅವರನ್ನು ಬಂಧಿಸಿಡಲಾಗುತ್ತದೆ.
ಭಾರತೀಯನೇ ಆಗಿಹೋದ ವ್ಯಾಂಗ್:
1969ರ ಮಾರ್ಚ್’ನಲ್ಲಿ ಹರ್ಯಾಣ ಹೈಕೋರ್ಟ್ ಈ ಚೀನೀ ಸೈನಿಕನಿಗೆ ಬಿಡುಗಡೆಯ ಭಾಗ್ಯ ದಯಪಾಲಿಸುತ್ತದೆ. ಆದರೆ ಚೀನಾಗೆ ಮರಳುವ ಭಾಗ್ಯ ದೊರಕುವುದಿಲ್ಲ. ಜೀವನ ನಿರ್ವಹಣೆಗೆ ಇವರು ಮಧ್ಯಪ್ರದೇಶದ ಬಾಲಘಾಟ್’ನ ಮಿಲ್’ವೊಂದರಲ್ಲಿ ವಾಚ್’ಮ್ಯಾನ್ ಆಗಿ ದುಡಿಯಲು ಆರಂಭಿಸುತ್ತಾರೆ. ಎಲ್ಲರೂ ಇವರನ್ನು ನೇಪಾಳೀ ಗೂರ್ಖಾ ಎಂದೇ ಭಾವಿಸಿ ರಾಜ್ ಬಹದ್ದೂರ್ ಎಂದು ಹೆಸರಿಡುತ್ತಾರೆ. 1975ರಲ್ಲಿ ಸುಶೀಲಾ ಎಂಬಾಕೆಯನ್ನು ವಿವಾಹವಾಗುವ ಇವರಿಗೆ ಒಬ್ಬ ಗಂಡು ಮಗನಿದ್ದಾನೆ.
ಆದರೆ, ಅನೇಕ ವರ್ಷಗಳಿಂದ ರಾಜ್ ಬಹದ್ದೂರ್, ಅಕಾ ವ್ಯಾಂಗ್ ಕೀ ಅವರು ಚೀನಾಗೆ ಮರಳುವ ಪ್ರಯತ್ನವನ್ನು ಎಡಬಿಡದೇ ಮುಂದುವರಿಸುತ್ತಲೇ ಇರುತ್ತಾರೆ. ಅಧಿಕಾರಕ್ಕೆ ಬಂದ ಪ್ರಧಾನಿಗಳಿಗೆ ಸತತವಾಗಿ ಮನವಿ ಮಾಡಿಕೊಂಡು ಬಂದರೂ ಏನೂ ಪ್ರಯೋಜವನಾಗಿರಲಿಲ್ಲ. ಚೀನಾದಲ್ಲಿರುವ ತಮ್ಮ ಸಂಬಂಧಿಕರನ್ನು ಕೂಡಿಕೊಳ್ಳುವ ಅವರ ಹೆಬ್ಬಯಕೆ ಮೋದಿಯಿಂದಲಾದರೂ ಈಡೇರುತ್ತದಾ? ಭಾರತ ಮತ್ತು ಚೀನಾ ನಡುವೆ ಸಂಬಂಧ ಹಳಸುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ಇಳಿ ವಯಸ್ಸಿನ ಈ ಚೀನೀ ಯೋಧನಿಗೆ ಬಿಡಗುಡೆಯ ಭಾಗ್ಯ ದೊರಕುತ್ತದಾ ಎಂದು ಕಾದುನೋಡಬೇಕು.

Comments are closed.