ರಾಷ್ಟ್ರೀಯ

ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ; ಮತ್ತೋರ್ವ ಉಗ್ರ ಪ್ರಾಣ ರಕ್ಷಣೆಗೆ ನದಿಗೆ ಹಾರಿದ

Pinterest LinkedIn Tumblr

kash

ಶ್ರೀನಗರ: ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಈಗಾಗಲೇ ಹತ್ಯೆಗೈಯ್ಯಲಾಗಿದ್ದು, ಭಾರತೀಯ ಸೈನಿಕರ ದಾಳಿಯಲ್ಲಿ ಗಾಯಗೊಂಡಿರುವ ಮತ್ತೋರ್ವ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ ಹಾರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸೇನಾ ಮೂಲಗಳ ಪ್ರಕಾರ ಬಾರಾಮುಲ್ಲಾದ ಹಿಂಬದಿಯಲ್ಲಿರುವ ಪಾರ್ಕ್ ಮೂಲಕ ಸೇನಾ ಶಿಬಿರ ಪ್ರವೇಶಿಸುವ ಉಗ್ರರ ಯತ್ನವನ್ನು ಅಲ್ಲಿ ಪಹರೆ ನಡೆಸುತ್ತಿದ್ದ ಭಾರತೀಯ ಯೋಧರು ವಿಫಲಗೊಳಿಸಿದ್ದು, ಪ್ರತಿ ದಾಳಿ ನಡೆಸುವ ಮೂಲಕ ಉಗ್ರರನ್ನು ಹಿಮ್ಮೆಟಿಸಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದ್ದು, ಪ್ರಾಣಭೀತಿಯಿಂದ ಓರ್ವ ಉಗ್ರ ಬಾರಾಮುಲ್ಲಾ ತೊರೆದಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಭಾರತೀಯ ಸೇನೆಯ ಒಂದಷ್ಟು ಯೋಧರು ಬೆನ್ನು ಹತ್ತಿದ್ದು, ಸಮೀಪದ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಉಗ್ರ ಸಮೀಪದ ಝೇಲಂ ನದಿಗೆ ಹಾರಿ ಪ್ರಾಣ ಉಳಿಸಿಕೊಳ್ಳುವ ಯತ್ನ ನಡೆಸಿದ್ದಾನೆ. ಮೂಲಗಳ ಪ್ರಕಾರ ಝೇಲಂ ನದಿಗೆ ಹಾರಿರುವ ಗಾಯಗೊಂಡ ಉಗ್ರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ಕಳೆದ ರಾತ್ರಿಯಿಂದ ನಡೆಯುತ್ತಿದ್ದ ಸೇನಾಕಾರ್ಯಾಚರಣೆ ಮುಕ್ತಾಯವಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿಕೆ ನೀಡಿದೆ.

ಸೇನೆಯ ಪ್ರಾಥಮಿಕ ಮೂಲಗಳ ಪ್ರಕಾರ ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನದಿಂದ ಯಾವುದೇ ಉಗ್ರರು ಭಾರತಕ್ಕೆ ನುಸುಳಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿರುವ ಕೆಲ ಸ್ಲೀಪರ್ ಸೆಲ್ ಗಳಿಗೇ ಅಲ್ಲಿನ ಉಗ್ರಗಾಮಿ ಸಂಘಟನೆ ಮುಖಂಡರು ನಿರ್ದೇಶನ ನೀಡುವ ಮೂಲಕ ದಾಳಿ ನಡೆಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಈ ಹಿಂದೆ ಭಾರತೀಯ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸೀಮಿತ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಬಾರಾಮುಲ್ಲಾ ಸೇನಾ ಶಿಬಿರದ ಮೇಲೆ ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಈವರೆಗೂ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಮತ್ತಿಬ್ಬರು ಉಗ್ರರು ಪರಾರಿಯಾಗಿದ್ದಾರೆ. ಅಂತೆಯೇ ಘಟನೆಯಲ್ಲಿ ಓರ್ವ ಬಿಎಸ್ ಎಫ್ ಯೋಧ ಹುತಾತ್ಮನಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಯೋಧರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಪೈಕಿ ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Comments are closed.