ಸಾರಂಗಪುರ (ಗುಜ ರಾತ್), ಆ.16- ಸ್ವಾಮಿ ನಾರಾಯಣರ ಆಧ್ಯಾತ್ಮಿಕ ತತ್ವೋಪದೇಶಗಳು ಹಾಗೂ ಗುರು (ಸ್ವಾಮಿ ನಾರಾಯಣ) ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ತಮ್ಮ ನಿರಂತರ ಪರಿಶ್ರಮದ ಜತೆಗೇ ನವದೆಹಲಿಯ ಸ್ವಾಮಿ ನಾರಾಯಣ ಅಕ್ಷರಧಾಮದಂತಹ 1,100 ಮಂದಿರಗಳ ನಿರ್ಮಾತೃ, ಪ್ರಮುಖ್ ಸ್ವಾಮಿ ಅವರು ಇಹಲೋಕ ತ್ಯಜಿಸಿದ್ದು, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ದೇಶ-ವಿದೇಶಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. 95 ವರ್ಷ ವಯಸ್ಸಾಗಿದ್ದ ಸ್ವಾಮೀಜಿ, ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದರು. ಸ್ವಾಮೀಜಿಯವರ ಮಾನವತಾವಾದ, ಧಾರ್ಮಿಕ ಶ್ರದ್ಧೆ ಹಾಗೂ ಆಧ್ಯಾತ್ಮ ವಿಷಯಗಳಿಗಾಗಿ ಅನೇಕ ಗಣ್ಯರು ಇವರ ಪರಮ ಭಕ್ತರಾಗಿದ್ದರು.
ಟಿಬೆಟಿಯನ್ನರ ಧರ್ಮಗುರು ದಲಾಯ್‍ಲಾಮಾ, ಭಾರತದ ದಿ.ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ನಿನ ಪ್ರಿನ್ಸ್ ಚಾಲ್ರ್ಸ್, ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್, ಬಹ್ರೈನ್‍ನ ಅರಸು, ಶೇಖ್ ಇಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಇವರ ಭಕ್ತ ಸಮೂಹದಲ್ಲಿದ್ದಾರೆ.
ಶನಿವಾರ ಇಹಲೋಕ ತ್ಯಜಿಸಿದ ಶ್ರೀ ಸ್ವಾಮಿಯವರ ಅಂತ್ಯಕ್ರಿಯೆ ಆ.17ರಂದು ಅವರ ಕರ್ಮಭೂಮಿ ಸಾರಂಗಪುರದಲ್ಲಿ ನಡೆಯಲಿದೆ. 1921ರ ಡಿಸೆಂಬರ್ 7ರಂದು ಗುಜರಾತಿನ ವಡೋದರಾ ಜಿಲ್ಲೆಯ ಚಾನ್ಸಾಡ್ ಎಂಬ ಕುಗ್ರಾಮದ ನಿವಾಸಿಗಳಾದ ಬಡ ರೈತ ಕುಟುಂಬವೊಂದರಲ್ಲಿ ಜನಿಸಿದ ಬಾಲಕಿ ಮುಂದೆ ಗುರುದೀಕ್ಷೆ ಪಡೆದು ಸಾಧು ನಾರಾಯಣ ಸ್ವರೂಪದಾಸ್ ಆದರು. ನಂತರ ಅವರನ್ನು ಭಗವಾನ್ ಸ್ವಾಮಿ ನಾರಾಯಣ ಪರಂಪರೆಯ ಪ್ರಮುಖರನ್ನಾಗಿ ನೇಮಿಸಲಾಯಿತು. ಅಂದಿನಿಂದ ಅವರು ಪ್ರಮುಖ್ ಸ್ವಾಮಿ ಎಂತಲೇ ಜನಪ್ರಿಯರಾಗಿದ್ದರು.
Comments are closed.