ಮುದ್ದಾದ ನಾಯಿ ಮರಿ ಕಂಡರೆ ಮನೆಗೆ ತಂದು ಸಾಕೋಣ ಅನ್ನಿಸದೇ ಇರುತ್ತಾ? ಹಾಗೆ ಕರೆ ತಂದ ನಾಯಿಮರಿಗೆ ಹೇಗೆ ವರ್ತಿಸಬೇಕು ಅಂತ ಹೇಳಿಕೊಡಬೇಕಲ್ಲವೇ? ಹಾಗೆ ನಾಯಿಮರಿಗೆ ಪಾಠ ಹೇಳುವುದಕ್ಕೆ ಒಬ್ಬರಿದ್ದಾರೆ.
ಹೆಸರು ಅಮೃತ್ ಶ್ರೀಧರ್ ಹಿರಣ್ಯ. ನಾಯಿಗಳ ಮನಃ ಶಾಸ್ತ್ರಜ್ಞ. ಅರ್ಥಾತ್ ಡಾಗ್ ಬಿಹೇವಿಯರಲಿಸ್ಟ್. ನಿಮ್ಮ ನಾಯಿ ಮರಿಯನ್ನು ಇವರ ಕಸ್ಟಡಿಯಲ್ಲಿ ಬಿಟ್ಟರೆ ಅದರ ಮನಸ್ಥಿತಿ ಅರಿತು ಟ್ರೈನಿಂಗ್ ಕೊಡುತ್ತಾರೆ. ನಾಯಿಗಳೇ ನಾಯಿಗಳಿಗೆ ಟ್ರೈನಿಂಗ್ ಕೊಡೋದು ಇಲ್ಲಿಯ ಸ್ಪೆಷಾಲಿಟಿ. ಅಮೃತ್ ಅವರ ಬಳಿ ಟ್ರೈನ್ ಆಗಿರೋ ನಾಯಿಗಳ ತಂಡ ಇದೆ. ಅವುಗಳಿಗೆ ಹೊಸ ನಾಯಿಮರಿಗಳನ್ನು ಟ್ರೈನ್‌ಅಪ್ ಮಾಡೋ ಕೆಲಸ. ಮನುಷ್ಯರಿಗೆ ಗೊತ್ತಾಗದ ಸೂಕ್ಷ್ಮ ಸಂವೇದನೆಗಳಲ್ಲಿ ಅವು ಟ್ರೈನ್‌ಅಪ್ ಮಾಡೋ ರೀತಿಯೇ ವಿಶೇಷ. ನಾಯಿ ಜೊತೆಗೆ ವಾಕ್ ಹೋಗುವಾಗ ಪಕ್ಕದಲ್ಲೊಂದು ಪಪ್ಪಿ ತನ್ನ ಮಾಲಕಿಯ ಆಜ್ಞೆಯನ್ನು ಪಾಲಿಸೋ ರೀತಿ ಕಂಡು ನೀವು ಬೆರಗಾಗಿರಬಹುದು, ನನ್ನ ನಾಯಿಮರಿಗೂ ಅಷ್ಟೊಳ್ಳೆ ಬುದ್ಧಿ ಬಂದ್ರೆ ಅಂದುಕೊಂಡಿರಬಹುದು.
ನಿಮ್ಮ ನಾಯಿಮರಿಯನ್ನು “ಡಾಗ್ ಗುರು’ಗೆ ಕಳುಹಿಸಿದ್ರೆ ನಿಮ್ಮ ಬೇರೆಲ್ಲ ಆಣತಿಯನ್ನು ಪಾಲಿಸುತ್ತೆ. ಮೊದಲ ಹಂತದ ಟ್ರೈನಿಂಗ್‌ನಲ್ಲೇ, ಆಣತಿಯಂತೆ ಕೂರೋದು, ನಿಲ್ಲೋದು, ತುದಿ ಗಾಲಲ್ಲಿ ನಡೆಯೋದು, ಹೇಳಿದ್ದನ್ನು ನೆನಪಿಟ್ಟುಕೊಳ್ಳೋದು, ಕೆಲವು ಸಾಮಾಜಿಕ ನಡವಳಿಕೆಗಳು ಹಾಗೂ ಸೇಫ್ ಹ್ಯಾಂಡಲಿಂಗ್ ಅನ್ನು ಕಲಿಸುತ್ತಾರೆ. ಕೆಲವೇ ಸಮಯದಲ್ಲಿ ನಿಮ್ಮ ನಾಯಿ ಬೇಸಿಕ್ ಟ್ರೈನ್‌ಅಪ್ ಆಗುತ್ತೆ, ಬಳಿಕ ನಿಮಗೆ ಟ್ರೈನಿಂಗ್ ಕೊಡ್ತಾರೆ, ಕಮಾಂಡ್‌ಗಳನ್ನು ಹೇಗೆ ಕೊಡೋದು ಅಂತ. ನಂತರ ಪಪ್ಪಿಗೆ ವರ್ತನಾ ತರಬೇತಿ ಕೊಡುತ್ತಾರೆ.
ಕಚ್ಚೋದು, ಪರಚೋದು, ಗಿಡ ಕಚ್ಚೋದು, ಶಬ್ದಕ್ಕೆ ಹೆದರೋದು ಮೊದಲಾದ ನಾಯಿಗಳ ವರ್ತನೆ ಯನ್ನು ತಿದ್ದುತ್ತಾರೆ. ಇದಲ್ಲದೇ ಸ್ಟ್ರೆಸ್‌ನಿಂದ ವ್ಯಕ್ತಿಯ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವನ್ನೂ ಈ ನಾಯಿಗಳಿಗೆ ಕಲಿಸಲಾಗುತ್ತೆ. ರಕ್ಷಣಾ ತಂತ್ರಗಳು, ಬಾಂಬ್‌ಪತ್ತೆಯಂಥ ಟೆಕ್ನಿಕ್‌ಗಳನ್ನೂ ಕಲಿಸುತ್ತಾರೆ.
ಎಲ್ಲಿ?: 10/2ಬಿ, ಮಾಲಿಗೊಂಡನಹಳ್ಳಿ, ರಾಮೋಹಳ್ಳಿ, ಕೆಂಗೇರಿ
ಫೀ ಸೆಷ್ಟು?: ಊಟ, ವಸತಿ ಸೇರಿ ತಿಂಗಳಿಗೆ 15,000 ರೂ.
ಸಂಪರ್ಕ: 99642 22211 ಅಥವಾ 97397 39622
ವಿವರಗಳಿಗೆ www.dogguru.in
-ಉದಯವಾಣಿ
Comments are closed.