ರಾಷ್ಟ್ರೀಯ

ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಸೌದಿ ದೊರೆ: ಸುಷ್ಮಾ ಸ್ವರಾಜ್

Pinterest LinkedIn Tumblr

saudi-indians-sushmaನವದೆಹಲಿ: ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡು ಸಿಕ್ಕಿ ಹಾಕಿಕೊಂಡಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಎಲ್ಲಾ ರೀತಿಯಲ್ಲಿ ನೆರವು ನೀಡುವುದಾಗಿ ಅಲ್ಲಿನ ದೊರೆ ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಅವರು, ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೌದಿ ಅರೇಬಿಯಾ ದೊರೆ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

”ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಸೌದಿ ಅರೇಬಿಯಾ ದೊರೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಈಗ ಅಲ್ಲಿದ್ದಾರೆ. ನಿನ್ನೆ ಅವರು ಅಲ್ಲಿನ ಕಾರ್ಮಿಕ ಸಚಿವರನ್ನು ಭೇಟಿ ಮಾಡಿದ್ದರು. ಭಾರತೀಯ ನೌಕರರಿಗೆ ಸ್ವದೇಶಕ್ಕೆ ಬರಲು ನಿರ್ಗಮನ ವೀಸಾ ನೀಡಲು ಅಧಿಕಾರಿಗಳು ಸೂಚಿಸಿದ್ದು, ಅವರ ವಿಮಾನದಲ್ಲಿ, ಅವರ ಖರ್ಚಿನಲ್ಲಿಯೇ ಭಾರತಕ್ಕೆ ಕಳುಹಿಸಿಕೊಡಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.

ಯಾರು ಅಲ್ಲಿ ಉಳಿದು ಬೇರೆ ಉದ್ಯೋಗ ಮಾಡಲು ಸಮರ್ಥರೋ ಅಂಥವರಿಗೆ ಬೇರೆ ಉದ್ಯೋಗ ನೀಡಲು ಸೌದಿ ಅರೇಬಿಯಾ ದೊರೆ ಒಪ್ಪಿಕೊಂಡಿದ್ದಾರೆ.

ನೌಕರರಿಗೆ ಸಿಗಬೇಕಾಗಿರುವ ಬಾಕಿ ವೇತನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ಕಾರ್ಮಿಕ ಇಲಾಖೆಯಲ್ಲಿ ತಮಗೆ ಬರಬೇಕಾಗಿರುವ ಹಣದ ಬಗ್ಗೆ ಕೇಳಬಹುದು. ಇಲ್ಲಿಗೆ ಬಂದ ನಂತರವೂ ಬಾಕಿ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಭರವಸೆ ನೀಡಿದೆ ಎಂದರು.

ಭಾರತೀಯರು ಉಳಿದುಕೊಂಡಿರುವ ಶಿಬಿರಕ್ಕೆ ಸೌದಿ ಆಡಳಿತ, ಆಹಾರ, ವೈದ್ಯಕೀಯ ನೆರವು, ಶೌಚಾಲಯ ಮತ್ತು ಇತರ ನೆರವನ್ನು ನೀಡುತ್ತಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಭಾರತೀಯರಿಗೆ ಸಹಾಯ ಮಾಡಿದ ಸೌದಿ ಸರ್ಕಾರಕ್ಕೆ ಸುಷ್ಮಾ ಸ್ವರಾಜ್ ಧನ್ಯವಾದ ಹೇಳಿದರು.

ಸೌದಿ ಅರೇಬಿಯಾದ ಕಂಪೆನಿಯೊಂದು ಹಣಕಾಸು ಬಿಕ್ಕಟ್ಟು ಎದುರಿಸಿದ್ದರಿಂದ ಮುಚ್ಚಿತ್ತು. ಇದರಿಂದ ಸಾವಿರಾರು ನೌಕರರು ಬೀದಿಗೆ ಬಂದಿದ್ದಾರೆ. ಅವರಲ್ಲಿ ಸುಮಾರು 7 ಸಾವಿರದ 700 ಭಾರತೀಯ ನೌಕರರು ಒಳಗೊಂಡಿದ್ದಾರೆ. ಸ್ವದೇಶಕ್ಕೆ ಮರಳಲು ಇಚ್ಛಿಸುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಮತ್ತು ಅಲ್ಲಿರುವವರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸಚಿವ ವಿ.ಕೆ.ಸಿಂಗ್ ಪ್ರಸ್ತುತ ರಿಯಾದ್ ನಲ್ಲಿದ್ದಾರೆ.

Comments are closed.