ಲಖನೌ: ಮಾಯಾವತಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಪ್ರಕರಣದಲ್ಲಿ, ಮಾಯಾವತಿ ಹಾಗೂ ಬಿಎಸ್ ಪಿಯ ಕೆಲವು ನಾಯಕರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಮಾಯಾವತಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ಉಚ್ಛಾಟಿತ ನಾಯಕ ದಯಾಶಂಕರ್ ಸಿಂಗ್ ನ ಕುಟುಂಬದವರು ಬಿಎಸ್ ಪಿ ನಾಯಕಿ ಹಾಗೂ ಬಿಎಸ್ ಪಿ ನಾಯಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಮಾಯಾವತಿ ಹಾಗೂ ಪಕ್ಷದ ಕೆಲವು ನಾಯಕರ ವಿರುದ್ಧ ಎಫ್ಐ ಆರ್ ದಾಖಲಾಗಿದೆ.
ನನ್ನ ಪತಿ ದಯಾಶಂಕರ್ ರಾಜಕೀಯದಲ್ಲಿದ್ದಾರೆ. ಆದರೆ ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ. ಹೀಗಿದ್ದರೂ ಬಿಎಸ್ ಪಿ ನಾಯಕರು ನಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಇದರಿಂದಾಗಿ ನನ್ನ ಮಗಳು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾಳೆ. ದಯಾಶಂಕರ್ ವಿರುದ್ಧದ ಪ್ರತಿಭಟನೆ ವೇಳೆ ಬಿಎಸ್ ಪಿ ಮುಖಂಡರು ಬಳಸಿದ ಭಾಷೆ ಅವಹೇಳನಕಾರಿಯಾಗಿತ್ತು, ರಾಜಕೀಯ ವಿವಾದಲ್ಲಿ ಕುಟುಂಬದವರನ್ನು ಎಳೆದು ತರಲಾಗುತ್ತಿದೆ ಎಂದು ದಯಾಶಂಕರ್ ಪತ್ನಿ, ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ಹಾಗೂ ಪಕ್ಷದ ನಾಯಕರ ವಿರುದ್ಧ ಪೊಲೀಸರು ಎಫ್ಐ ಆರ್ ದಾಖಲಿಸಿದ್ದಾರೆ.
ಚಂಡೀಗಢ ಬಿಎಸ್ಪಿ ಘಟಕದ ಮುಖ್ಯಸ್ಥೆ ಜನ್ನತ್ ಜಾಹನ್ ಅವರು ದಯಾಶಂಕರ್ ನಾಲಿಗೆ ಕಟ್ ಮಾಡಿದರೆ 50 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು, ಇದರಿಂದ ಆತಂಕಗೊಂಡಿದ್ದೇವೆ ಎಂದು ದಯಾಶಂಕರ್ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Comments are closed.