ಹೈದರಾಬಾದ್: ಪುತ್ರಿಯರಿಬ್ಬರು ಒಂದು ಹಳೆಯ ಫೋಟೋ ಮತ್ತು ಕೆಲವು ದಾಖಲೆಗಳ ಸಹಾಯದಿಂದ 28 ವರ್ಷಗಳ ಬಳಿಕ ತಮ್ಮ ತಾಯಿ ಜೊತೆ ಒಂದುಗೂಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನಗರ ಪೊಲೀಸರು ನಜಿಯಾ ಬೇಗಮ್ ಎಂಬ 60 ವರ್ಷದ ಮಹಿಳೆಯನ್ನು ಮೂರು ತಿಂಗಳಿಗೂ ಹೆಚ್ಚು ಕಾಲ ಹುಡುಕಿ ಪತ್ತೆ ಹಚ್ಚಿದ್ದಾರೆ.
ಹಿನ್ನೆಲೆ: ನಜಿಯಾ ಹೈದರಾಬಾದ್ ನ ಸಂತೋಷ್ ನಗರದವರು. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿದ್ದ ರಶೀದ್ ಎಂಬಾತನನ್ನು 1981ರಲ್ಲಿ ಹೈದರಾಬಾದ್ ಹಳೆ ನಗರದ ಖಾಜಿ ಆಫೀಸಿನಲ್ಲಿ ಮದುವೆಯಾಗಿದ್ದರು.ಮದುವೆಯಾದ ನಂತರ ಕೆಲ ವ ರ್ಷಗಳ ಬಳಿಕ ಯುಎಇಯಲ್ಲಿದ್ದ ಗಂಡನ ಜೊತೆ ಸಂಸಾರ ಮಾಡಲು ಹೋಗಿದ್ದರು.
ಅಲ್ಲಿಗೆ ಹೋದಾಗಲೇ ನಜಿಯಾಗೆ ರಶೀದ್ ಈಗಾಗಲೇ ಒಂದು ಮದುವೆಯಾಗಿದ್ದಾನೆ ಎಂದು ಗೊತ್ತಾಗಿದ್ದು. ಹಾಗಾಗಿ ಇಬ್ಬರ ನಡುವೆ ಜಗಳಗಳು ಪ್ರತಿದಿನ ನಡೆಯುತ್ತಿತ್ತು. ಗಂಡ-ಹೆಂಡತಿ ಮಧ್ಯೆ ಸಂಬಂಧ ಹಳಸಲಾರಂಭಿಸಿತು. ಅಲ್ಲಿ ನಜಿಯಾ ಸುಮಾರು 4 ವರ್ಷಗಳ ಕಾಲವಿದ್ದರು. ಇಬ್ಬರು ಪುತ್ರಿಯರು ಹುಟ್ಟಿದರು. ಅವರೇ ಆಯೆಶಾ ರಶೀದ್ ಮತ್ತು ಫಾತಿಮಾ ರಶೀದ್. ಇಂದು ಮಕ್ಕಳಿಗೆ 29 ಮತ್ತು 26 ವರ್ಷಗಳಾಗಿವೆ.
ನಜಿಯಾಳ ಜೀವನ ನಿಜಕ್ಕೂ ದುರಂತಕ್ಕೀಡಾಗಿದ್ದು ರಶೀದ್ ಆಕೆಯನ್ನು ಒತ್ತಾಯಪೂರ್ವಕವಾಗಿ ಮನೆಯಿಂದ ಹೊರಹಾಕಿದಾಗ. ಹೈದರಾಬಾದಿಗೆ ವಿಮಾನ ಟಿಕೆಟ್ ಮಾಡಿ ಒತ್ತಾಯಪೂರ್ವಕವಾಗಿ ಕಳುಹಿಸಿದ. ಆದರೆ ಮಕ್ಕಳನ್ನು ಕರೆದುಕೊಂಡು ಹೋಗಲು ಬಿಡಲಿಲ್ಲ. ನಜಿಯಾ ಮನೆಯಿಂದ ಹೊರಬಿದ್ದಾಗ ಎರಡನೆಯ ಮಗಳಿಗೆ ಕೇವಲ 6 ತಿಂಗಳು. ಹೈದರಾಬಾದಿಗೆ ಬಂದ ನಜಿಯಾ ಜೀವನದಲ್ಲಿ ತುಂಬಾ ನೊಂದು ಎರಡು ವರ್ಷಗಳ ಬಳಿಕ ಕರ್ನಾಟಕದ ಬೀದರ್ ನ ವ್ಯಕ್ತಿಯೊಬ್ಬರನ್ನು ಮದುವೆಯಾದರು.
ಯೌವ್ವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದ ರಶೀದ್ ಇಳಿವಯಸ್ಸಿನಲ್ಲಿ ಪತ್ನಿಯ ನೆನಪಾಗಿ ನಿಮ್ಮ ಅಮ್ಮ ಹೈದರಾಬಾದ್ ನಲ್ಲಿದ್ದಾಳೆ ಎಂದು 2001ರಲ್ಲಿ ಹೇಳಿದ್ದ. ಆದರೆ ಸಹೋದರಿಯರು ತಮ್ಮ ಅಮ್ಮನನ್ನು ಹುಡುಕುವ ಗೋಜಿಗೆ ಹೋಗಿರಲಿಲ್ಲ. ಅವರಿಗೆ ನಂತರ ಮದುವೆಯಾಯಿತು. ಮದುವೆಯಾದ ಮೇಲೆ ಧೈರ್ಯ ಮಾಡಿ ಅಮ್ಮನನ್ನು ಹುಡುಕಬೇಕೆಂದು ಹೈದರಾಬಾದಿಗೆ ಬಂದರು. ಮೊದಲ ಪ್ರಯತ್ನ ಫಲ ಕೊಡಲಿಲ್ಲ. ಎರಡನೇ ಸಲ ಕಳೆದ ಜನವರಿಯಲ್ಲಿ ಹೈದರಾಬಾದ್ ದಕ್ಷಿಣ ವಲಯದ ಡಿಸಿಪಿ ವಿ.ಸತ್ಯನಾರಾಯಣ ಅವರನ್ನು ಭೇಟಿ ಮಾಡಿ ತಮ್ಮ ಅಮ್ಮನ ಫೋಟೋ, ಮದುವೆ ಸರ್ಟಿಫಿಕೇಟ್ ಮತ್ತು ಪಾಸ್ ಪೋರ್ಟ್ ನ ಹಳೆಯ ದಾಖಲೆಗಳನ್ನು ನೀಡಿದರು.
ನಜಿಯಾ ಮತ್ತು ರಶೀದ್ ಮದುವೆ ಮಾಡಿಸಿದ್ದ ಖಾಜಿ ತೀರಿ ಹೋಗಿದ್ದರು. ಮದುವೆ ಸಂಧಾನ ಮಾಡಿಸಿದ್ದ ಒಬ್ಬರೇ ಒಬ್ಬರು ಬದುಕುಳಿದಿದ್ದರು. ಅವರ ಮೂಲಕ ನಜಿಯಾರ ಇಬ್ಬರು ಸಂಬಂಧಿಕರ ಹೆಸರನ್ನು ಪಡೆದುಕೊಂಡರು. ಅವರ ಮೂಲಕ ಪೊಲೀಸರು ಜನವರಿಯಿಂದ ಮೂರು ತಿಂಗಳವರೆಗೆ ಸುಮಾರು ಸಾವಿರ ಮಂದಿಯನ್ನು ಪರೀಕ್ಷಿಸಿದೆವು ಎನ್ನುತ್ತಾರೆ ಡಿಸಿಪಿ ಸತ್ಯನಾರಾಯಣ.
ಪೊಲೀಸರು ಎರಡು ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾರಂಭಿಸಿದರು. ನಜಿಯಾ ಬೀದರ್ ನಲ್ಲಿ ಸಿಕ್ಕರು. ಮಕ್ಕಳು ತೀರಾ ಚಿಕ್ಕವರಿರುವಾಗಲೇ ಬಿಟ್ಟು ಬಂದಿದ್ದರಿಂದ ಅವರ ಪರಿಚಯ ನಜಿಯಾಗೆ ಬರಲಿಲ್ಲ.ಹಾಗಾಗಿ ಪೊಲೀಸರಿಗೆ ಇವರೇ ಸೋದರಿಯರ ತಾಯಿ ಎಂದು ದೃಢವಾಗಿ ಹೇಳಲಿಕ್ಕಾಗಲಿಲ್ಲ.
ಕೊನೆಗೆ ನಜಿಯಾ ಒಂದು ಗುರುತು ಹೇಳಿದರು. ಅವರ ಚಿಕ್ಕ ಮಗಳ ಕೈಯಲ್ಲಿ ಆರು ಬೆರಳುಗಳಿವೆ ಎಂದು. ಅದರಿಂದ ಇವರೇ ನಿಜವಾದ ತಾಯಿ ಎಂದು ದೃಢಪಡಿಸಿದ ಪೊಲೀಸರು ತಾಯಿ-ಮಕ್ಕಳನ್ನು ಬರ ಹೇಳಿದರು. ಮೊನ್ನೆ ಮಂಗಳವಾರ 60 ವರ್ಷದ ತಾಯಿ ನಜಿಯಾ ಹೈದರಾಬಾದಿನ ಪುರಾನಿ ಹವೇಲಿಯಲ್ಲಿರುವ ಡಿಸಿಪಿ ಕಚೇರಿ ಎದುರು ಮಕ್ಕಳ ಬರುವಿಕೆಗಾಗಿ ಕಾದು ನಿಂತಿದ್ದರು. ಅಲ್ಲಿಗೆ ಬಂದ ಅವರ ಇಬ್ಬರು ಪುತ್ರಿಯರು ತಮ್ಮ ಅಮ್ಮನ ಕಂಡು ಸಂತೋಷದಿಂದ ಬಿಗಿದಪ್ಪಿ ಆನಂದಭಾಷ್ಪ ಹರಿಸಿದರು. ಆ ದೃಶ್ಯವನ್ನು ನೋಡುತ್ತಿದ್ದರೆ ಎಂಥವರ ಮನಕಲಕುವಂತಿತ್ತು.
Comments are closed.