ನವದೆಹಲಿ (ಪಿಟಿಐ): ಮಹಾತ್ಮ ಗಾಂಧಿಯನ್ನು ಕೊಂದಿದ್ದು ಆರ್‌ಎಸ್‌ಎಸ್ ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಕ್ಷಮೆ ಕೋರುವಂತೆ ಮಂಗಳವಾರ ಸೂಚಿಸಿದೆ.
ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ನಾರಿಮನ್ ‘ಇದು ಬೇಜವಾಬ್ದಾರಿತನದ ಹೇಳಿಕೆ’ ಎಂದು ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿ ತಮ್ಮ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಬೇಕು ಅಥವಾ ಮಾನಹಾನಿಯ ವಿಚಾರಣೆ ಎದುರಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.
ರಾಹುಲ್ ಪರ ವಕೀಲರು ’ಗಾಂಧಿ ಅವರನ್ನು ಕೊಂದಿದ್ದು ಆರ್‌ಎಸ್‌ಎಸ್ ಎಂಬುದು ಚಾರಿತ್ರಿಕ ಸತ್ಯವಾಗಿದ್ದು ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದು ವಾದ ಮಂಡಿಸಿದರು.
ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆ ಸಂಬಂಧ ಕ್ಷಮೆ ಕೋರಲು ಸಿದ್ಧರಿಲ್ಲ ಆಗಾಗಿ ಅವರು ಸಮರ್ಥನೆಯವಾದವನ್ನು ಮಂಡಿಸುತ್ತಿದ್ದಾರೆ ಎಂದು ನ್ಯಾಯಪೀಠ ತಿಳಿಸಿತು.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಎರಡು ವಾರಗಳ ಕಾಲ ಮುಂದೂಡಿತು.
2014ರಲ್ಲಿ ರಾಹುಲ್ ಗಾಂಧಿ ಠಾಣೆಯ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಹಾತ್ಮಗಾಂಧಿಯನ್ನು ಕೊಂದ ಆರ್‌ಎಸ್‌ಎಸ್ ಜನರು ಇಂದು ಗಾಂಧಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ವಿವಾದಿತ ಹೇಳಿಕೆ ನೀಡಿದ್ದರು.
Comments are closed.