ಮಥುರಾ: ‘ನನ್ನ ಲವ್ವರ್‌ಗೆ ಬೇರೊಂದು ಹುಡುಗಿಯ ಜತೆಗೆ ಮದುವೆ ನಿಶ್ಚಯವಾಗಿದೆ; ಆದುದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ದಿಲ್ಲಿಗೆ ಹೋಗುತ್ತಿದ್ದ ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೋಪಾಲದ ಮಹಿಳೆಯೊಬ್ಬಳು ದಾಬ್ರಾ ಪೊಲೀಸ್ ಸುಪರಿಂಟೆಂಡೆಂಟರಿಗೆ ರೈಲಿನಿಂದಲೇ ಫೋನ್ ಮಾಡಿದ ವಿಲಕ್ಷಣಕಾರಿ ಘಟನೆ ವರದಿಯಾಗಿದೆ.
ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ರೈಲಿನಿಂದಲೇ ಮಹಿಳೆ ಮಾಡಿದ್ದ ಫೋನ್ ಕರೆಯನ್ನು ಸ್ವೀಕರಿಸಿದ ತತ್‌ಕ್ಷಣ ರೈಲ್ವೇ ರಕ್ಷಣಾ ಪಡೆಯ ಇನ್ಸ್‌ಪೆಕ್ಟರ್ ಸತ್ಯೇಂದ್ರ ಯಾದವ್ ಅವರು ರೈಲ್ವೇ ಪೊಲೀಸರಿಗೆ ವಿಷಯ ತಿಳಿಸಿದರು.
ಕೂಡಲೇ ಕಾರ್ಯೋನ್ಮುಖರಾದ ಆರ್‌ಪಿಎಫ್ ಸಿಬಂದಿಗಳು ಮಥುರಾ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿ ಮಹಿಳೆಯನ್ನು ಪೊಲೀಸ್ ಠಾಣೆಗೆ ತಂದರು. ಅಲ್ಲೇ ಆಕೆ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಳು. ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಒಯ್ಯಲಾಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಿದ ಡಾ. ಮುಕುಂದ್ ಬನ್ಸಾಲ್ ಅವರು “ಮಹಿಳೆ ವಿಷ ಸೇವಿಸಿಲ್ಲ; ಬೇರೆ ಯಾವುದೋ ಕಾರಣಕ್ಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ’ ಎಂದು ಹೇಳಿದರು.
ತನ್ನ ಪ್ರಿಯಕರನ ಮದುವೆ ಬೇರೊಂದು ಹುಡುಗಿಯೊಂದಿಗೆ ನಿಗದಿಯಾಗಿರುವ ಕಾರಣಕ್ಕೆ ಮಹಿಳೆಯು ಖನ್ನತೆಯಿಂದ ಬಳಲುತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಪ್ರಕಾರ ಮಹಿಳೆಯು ಭೋಪಾಲ್‌ನಲ್ಲಿ ತನ್ನ ಪ್ರಿಯಕರನ ವಿರುದ್ಧ ಪೊಲೀಸರಿಗೆ ಅತ್ಯಾಚಾರ ಮತ್ತು ವಂಚನೆಯ ದೂರು ನೀಡಿದ್ದಾಗಿ ತಿಳಿದುಬಂದಿದೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆಯ ಕುಟುಂಬದವರಿಗೆ ವಿಷಯವನ್ನು ತಿಳಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
-ಉದಯವಾಣಿ
Comments are closed.