ರಾಷ್ಟ್ರೀಯ

ಕುಡಿದ ಅಮಲಿನಲ್ಲಿ ವಿಡಿಯೋಗಾಗಿ ಗಂಗೆಗೆ ಹಾರಿ ಪ್ರಾಣ ಕಳೆದುಕೊಂಡ!

Pinterest LinkedIn Tumblr

Man-Jumps-into-Ganga-600ಡೆಹರಾಡೂನ್‌ : 27ರ ಹರೆಯದ ಓರ್ವ ಯುವಕ ತನ್ನ ಗೆಳೆಯರ ಚಿತಾವಣೆಯಿಂದ ನಾಟಕೀಯ ರೀತಿಯಲ್ಲಿ ಹರಿದ್ವಾರ ಸಮೀಪ ಗಂಗಾ ನದಿಗೆ ಹಾರಿ ಕಣ್ಮರೆಯಾಗಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಕಳೆದ ಮಂಗಳವಾರ ಕುಡಿದ ಅಮಲಿನಲ್ಲಿ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಗಂಗಾ ನದಿಗೆ “ಹಾರಬೇಕೋ ಬೇಡವೋ’ ಎಂಬ ಅಳುಕಿನ ಮನಸ್ಥಿತಿಯಲ್ಲಿ ಕೊನೆಗೂ ಹಾರಿದ ತರುಣನನ್ನು ಹರಿದ್ವಾರದ ಭದ್ರಾಬಾದ್‌ ಎಂಬಲ್ಲಿನ ಗಂಧಮೀರಪುರದ ನಿವಾಸಿ ಆಶಿಶ್‌ ಚೌಹಾಣ್‌ ಎಂದು ಗುರುತಿಸಲಾಗಿದೆ. ಆತ ಗಂಗಾ ನದಿಗೆ ಹಾರಿ 48 ತಾಸು ಕಳೆದರೂ ಇನ್ನೂ ಆತನ ದೇಹ ಪತ್ತೆಯಾಗಿಲ್ಲ.

ಆಶಿಶ್‌ ಚೌಹಾಣ್‌ನ ಸ್ನೇಹಿತರಾದ ಅಶ್ವಿ‌ನಿ ಚೌಹಾಣ್‌ ಮತ್ತು ಬಾಲರಾಜ್‌ ಕುಮಾರ್‌ ಗೆ ಆತ ಗಂಗಾ ನದಿಗೆ ಹಾರುವ ನಾಟಕೀಯ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿಯುವ ಹಂಬಲವಿತ್ತು. ಮದ್ಯದ ಅಮಲಿನಲ್ಲಿದ್ದ ಆಶಿಶ್‌, ನದಿಗೆ ಹಾರುವುದಕ್ಕೆ ತುಂಬ ಸಂಕೋಚ ಪಟ್ಟಂತಿದ್ದ. ಆದರೆ ಸ್ನೇಹಿತರ ಚಿತಾವಣೆಯಲ್ಲಿ ಆತ ಕೊನೆಗೂ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಗೆ ಹಾರಿಯೇ ಬಿಟ್ಟ.

ಆಶಿಶ್‌ ಚೌಹಾಣ್‌ನ ದೇಹವನ್ನು ನದಿಯಲ್ಲಿ ಹುಡುಕಾಡುವ ಕೆಲಸವನ್ನು ಪೊಲೀಸರು, ಮುಳುಗು ತಜ್ಞರ ಪೊಲೀಸರ ತಂಡದೊಂದಿಗೆ ಗುರುವಾರ ಸಂಜೆಯ ತನಕವೂ ಕೈಗೊಂಡಿದ್ದರು. ಆದರೆ ಅವರಿಗೆ ಚೌಹಾಣ್‌ ನ ದೇಹ ಪತ್ತೆಯಾಗಲಿಲ್ಲ.

ಆಶಿಶ್‌ ಒಬ್ಬ ಉತ್ತಮ ಈಜುಗಾರನಾಗಿದ್ದು ಆತ ನದಿಯಲ್ಲಿ ಮುಳುಗಿ ಸಾಯಬಹುದೆಂಬ ಕಲ್ಪನೆ ಆತನ ಸ್ನೇಹಿತರಿಗೆ ಇರಲಿಲ್ಲ. ಹಾಗಾಗಿ ಅವರಿಗೆ ಆಶಿಶ್‌ ಕಣ್ಮರೆಯಾಗಿರುವುದು ಆಘಾತಕಾರಿಯಾಗಿದೆ. ಆಶಿಶ್‌ ಚೌಹಾಣ್‌ನ ಮನೆಯವರು ಈ ಘಟನೆಯ ಬಗ್ಗೆ ಇನ್ನೂ ಪೊಲೀಸರಿಗೆ ದೂರು ಕೊಟ್ಟಿಲ್ಲ. ಆತನ ಸಾವು ಆಕಸ್ಮಿಕವಾಗಿದ್ದು ಆದಕ್ಕೆ ಯಾರೂ ಕಾರಣರಲ್ಲ ಎಂಬ ಪತ್ರವನ್ನು ಕುಟುಂಬದವರು ಪೊಲೀಸರಿಗೆ ನೀಡಿರುವುದಾಗಿ ಭದ್ರಬಾದ್‌ ಪೊಲೀಸ್‌ ಠಾಣಾಧಿಕಾರಿ ಅಮರ್‌ ಚಂದ್ರ ಶರ್ಮಾ ತಿಳಿಸಿದ್ದಾರೆ.
-ಉದಯವಾಣಿ

Comments are closed.