ರಾಷ್ಟ್ರೀಯ

ಕೋರ್ಟ್ ಗೆ ಕರೆದೊಯ್ದ ಕ್ರಿಮಿನಲ್ ಕೈದಿ ಜೊತೆ ಪೊಲೀಸರ ಗುಂಡು ಪಾರ್ಟಿ!

Pinterest LinkedIn Tumblr

Criminalನಾಸಿಕ್: ಕೊಲೆ, ಕೊಲೆ ಯತ್ನ ಸೇರಿದಂತೆ ಸುಮಾರು 36 ಪ್ರಕರಣಗಳಲ್ಲಿ ಬೇಕಾಗಿದ್ದ ಕೈದಿಯನ್ನು ಕೋರ್ಟ್ ವಿಚಾರಣೆಗೆ ಕರೆದೊಯ್ದು ಬಳಿಕ ಆತನ ಜೊತೆ ಐಶಾರಾಮಿ ಹೋಟೆಲ್ ಗೆ ಹೋಗಿ ಊಟ, ಮದ್ಯ ಸೇವಿಸಿ ರಾಜೋಪಚಾರ ಪಡೆದಿದ್ದ ಮೂವರು ಪೊಲೀಸರು ಸಸ್ಪೆಂಡ್ ಆಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮೋಕಾ ಕೇಸ್ ನಡಿ ಬಂಧಿತನಾಗಿದ್ದ ಕೈದಿಯನ್ನು ನಾಸಿಕ್ ಕೇಂದ್ರ ಕಾರಾಗೃಹದಿಂದ ಕೋರ್ಟ್ ಗೆ ಕರೆದೊಯ್ದು ನಿಗದಿತ ಸಮಯಕ್ಕಿಂತ ತಡವಾಗಿ ಪೊಲೀಸರು ಕರೆ ತಂದಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ನಿಜವಾದ ವಿಷಯ ಬೆಳಕಿಗೆ ಬಂದಿತ್ತು.

ಕರ್ತವ್ಯ ಲೋಪ ಎಸಗಿದ ಕಾನ್ಸ್ ಸ್ಠೇಬಲ್ ಗಳಾದ ಪ್ರಮೋದ್ ಜಾಧವ್, ಸಾಗರ್ ಬೋದ್ಳೆ ಮತ್ತು ರಾಹುಲ್ ಧೋಂಗ್ಡೆಯನ್ನು ಅಮಾನತುಗೊಳಿಸಲಾಗಿದೆ.

ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿ ಸಮೀರ್ ಪಠಾಣ್ ನನ್ನು ಪ್ರಕರಣದ ವಿಚಾರಣೆಗಾಗಿ ಸ್ಥಳೀಯ ಕೋರ್ಟ್ ಗೆ ಪೊಲೀಸರು ಕರೆದೊಯ್ದಿದ್ದರು. ವಿಚಾರಣೆ ಮುಗಿದ ನಂತರ ಪೊಲೀಸ್ ವಾಹನದಲ್ಲಿ ಜೈಲಿಗೆ ಆಗಮಿಸಿದ್ದರು. ತದನಂತರ ಪಠಾಣ್ ಮತ್ತು ಮೂವರು ಕಾನ್ಸ್ ಸ್ಟೇಬಲ್ ಗಳು ಖಾಸಗಿ ವಾಹನದಲ್ಲಿ ಹೊರಗೆ ಹೋಗಿದ್ದರು.

ಐಶಾರಾಮಿ ಹೋಟೆಲ್ ನಲ್ಲಿ ಕೈದಿ ಪಠಾಣ್ ನೀಡಿದ್ದ ಭರ್ಜರಿ “ಪಾರ್ಟಿ’ ಮುಗಿಸಿಕೊಂಡು ಪೊಲೀಸ್ ವ್ಯಾನ್ ನಲ್ಲಿ 7ಗಂಟೆಗೆ ಕಾರಾಗೃಹಕ್ಕೆ ವಾಪಸ್ ಆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

ಆ ಸಂದರ್ಭದಲ್ಲಿ ಇಷ್ಟು ತಡ ಯಾಕಾಯಿತು ಎಂದು ಪೊಲೀಸರಲ್ಲಿ ಅಧಿಕಾರಿಗಳು ಪ್ರಶ್ನಿಸಿದಾಗ, ಪೊಲೀಸ್ ವ್ಯಾನ್ ಬ್ರೇಕ್ ಡೌನ್ ಆಗಿತ್ತು, ಅದನ್ನು ರಿಪೇರಿ ಮಾಡಿಸಿಕೊಂಡು ಬರುವಷ್ಟರಲ್ಲಿ ತಡವಾಯಿತು ಎಂದು ಸಬೂಬು ಹೇಳಿದ್ದರು. ಬಳಿಕ ಈ ಬಗ್ಗೆ ತನಿಖೆ ನಡೆಸಿದಾಗ, ಕೈದಿ ಸೇರಿದಂತೆ ನಾಲ್ವರು ಊಟಕ್ಕಾಗಿ ಹೊರ ಹೋಗಿರುವುದು ತಿಳಿದು ಬಂದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ ನಾಲ್ವರು ಊಟಕ್ಕಾಗಿ ಹೊರಹೋಗಿದ್ದಾಗ ಅವರ ಜೊತೆ ಮತ್ತೊಬ್ಬ ಕ್ರಿಮಿನಲ್ ಗಣೇಶ್ ಸುರೇಶ್ ವಾಘಾ ಜೊತೆ ಸೇರಿಕೊಂಡಿದ್ದ ಎಂಬ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿಸ್ತ್ರತ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸ್ ಕಮೀಷನರ್ ವಿಜಯ್ ಪಾಟೀಲ್ ತಿಳಿಸಿದ್ದಾರೆ.
-ಉದಯವಾಣಿ

Comments are closed.