
ಭೋಪಾಲ್: ವಿದೇಶ ಪ್ರವಾಸಕ್ಕೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಮುಖಂಡರೊಬ್ಬರು ವ್ಯಂಗ್ಯವಾಡಿದ್ದು, ಕಾಣೆಯಾಗಿರುವನ ರಾಹುಲ್ ಗಾಂಧಿ ಕುರಿತು ಮಾಹಿತಿ ನೀಡಿದರೆ ಒಂದು ಲಕ್ಷ ರು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಧ್ಯ ಪ್ರದೇಶದ ಬಿಜೆಪಿ ಮುಖಂಡ ವಿಜೇಂದ್ರ ಸಿಂಗ್ ಸಿಸೋಡಿಯಾ ಎಂಬುವವರು ಇಂತಹುದೊಂದು ಪ್ರಕಟಣೆ ನೀಡಿದ್ದು, ರಾಹುಲ್ ಬಗ್ಗೆ ಸುಳಿವು ನೀಡಿದವರಿಗೆ ಬರೊಬ್ಬರಿ 1 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಇನ್ನು ತಮ್ಮ ಪ್ರಕಟಣೆಯಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಬಿಜೆಪಿ ಮುಖಂಡ ವಿಜೇಂದ್ರ ಸಿಂಗ್ ಸಿಸೋಡಿಯಾ, “ಕೆಲ ತಿಂಗಳ ಹಿಂದೆ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದು, ಅವರು ಪಕ್ಷದ ಅಭಿವೃದ್ಧಿ ಕುರಿತು ಕಾರ್ಯತಂತ್ರ ರೂಪಿಸಲು ವಿದೇಶಕ್ಕೆ ತೆರಳಿದ್ದಾರೆ. ಅಂತೆಯೇ ಹೆಚ್ಚು ಚೈತನ್ಯಯುತವಾಗಿ ಮರಳಲಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಈಗ ರಾಹುಲ್‌ಗೆ ಮತ್ತೆ ಚೈತನ್ಯದ ಕೊರತೆಯಾದಂತಿದೆ ಎಂದು ಟೀಕಿಸಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ವಕ್ತಾರರೂ ಕೂಡ ಆಗಿರುವ ವಿಜೇಂದ್ರ ಸಿಂಗ್ ಸಿಸೋಡಿಯಾ ಅವರು, ಚೈತನ್ಯ ತುಂಬಿಸಿಕೊಳ್ಳಲು ರಾಹುಲ್ ಎಲ್ಲಿಗೆ ಹೋಗಿದ್ದಾರೆ? ಯಾರನ್ನು ಭೇಟಿ ಮಾಡಲು ಹೋಗಿದ್ದಾರೆ? ಮತ್ತು ಅವರು ಹೇಗೆ ಚೈತನ್ಯ ತುಂಬಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗಷ್ಟೇ ತಮ್ಮ 46ನೇ ಜನ್ಮದಿನ ಆಚರಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಯುವರಾಜ ಮರುದಿನವೇ ವಿದೇಶಕ್ಕೆ ಹಾರಿದ್ದರು. ಆದರೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ರಾಹುಲ್ ಗಾಂಧಿ ಕಚೇರಿಯಾಗಲಿ ರಾಹುಲ್ ಗಾಂಧಿ ಎಲ್ಲಿಗೆ ಹೋಗಿದ್ದಾರೆ ಎಂಬುದರ ಕುರಿತು ಸ್ಪಷ್ಟನೆ ನೀಡಿರಲಿಲ್ಲ. ಕಳೆದ ವರ್ಷವೂ ಹೀಗೆಯೇ ರಾಹುಲ್ ದಿಢೀರ್ ನಾಪತ್ತೆಯಾಗಿ 56 ದಿನಗಳ ಬಳಿಕ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದರು.
Comments are closed.