ರಾಮಪುರ, ಉತ್ತರ ಪ್ರದೇಶ : ತನ್ನ ಪತ್ನಿಯನ್ನೇ ಮನೆಗೆ ಕರೆಸಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ಯಾವ ಅಧಿಕಾರವಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶ ನಗರಾಭಿವೃದ್ಧಿ ಸಚಿವರಾಗಿರುವ ಆಜಂ ಖಾನ್ ಪ್ರಶ್ನಿಸುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.
“ಮೋದಿ ಅವರು ತಮ್ಮ ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ; ಆದರೆ ಪತ್ನಿಯನ್ನು ಮನೆಗೆ ಕರೆಸಿಕೊಂಡಿಲ್ಲ; ಆಕೆಗೆ ಕೊಡಬೇಕಾದ ಗೌರವವನ್ನು ಕೊಟ್ಟಿಲ್ಲ. ಇದು ಸರಿಯಲ್ಲ; ಮೋದಿ ಅವರು ಪತ್ನಿಯನ್ನು ಮನೆಗೆ ಕರೆಸಿಕೊಂಡಾಗಲೇ ನಾವು ಅವರಿಗೆ ಕೃತಜ್ಞರಾಗಲು ಸಾಧ್ಯ’ ಎಂದು ಆಜಂ ಖಾನ್ ಆಜ್ ತಕ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
“ಪ್ರಧಾನಿ ಮೋದಿ ಅವರು ದೇಶದ ಅಲ್ಪ ಸಂಖ್ಯಾಕ ಸಮುದಾಯದವರನ್ನು ಪಾಕಿಸ್ಥಾನಕ್ಕೆ ಕಳುಹಿಸುವ ಮಾತನ್ನು ಆಡುತ್ತಾರೆ; ಆದರೆ ನಮಗೆ ಯಾವುದೇ ಮಾಹಿತಿ ನೀಡದೆ ತಾನು ಸ್ವತಃ ಇಸ್ಲಾಮಿಕ್ ದೇಶಕ್ಕೆ ಹೋಗುತ್ತಾರೆ; ಪಾಕ್ ಪ್ರಧಾನಿಯ (ನವಾಜ್ ಷರೀಫ್) ತಾಯಿಯ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಮುಚ್ಚಿದ ಕೋಣೆಯಲ್ಲಿ ದೇಶ ದ್ರೋಹಿಗಳಿಗೆ ಹಸ್ತ ಲಾಘವ ನೀಡುತ್ತಾರೆ’ ಎಂದು ಆಜಂ ಖಾನ್ ಹೇಳಿದರು.
ಕೈರಾನಾದಿಂದ ಆಗಿದೆ ಎನ್ನಲಾದ ಹಿಂದುಗಳ ಸಾಮೂಹಿಕ ವಲಸೆಯ ಬಗ್ಗೆ ಮಾತನಾಡಿದ ಆಜಂ ಖಾನ್, ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಗುಜರಾತ್‌ನಂತೆ ಭಾರೀ ದೊಡ್ಡ ದೊಂಬಿ ನಡೆಯಬೇಕೆಂಬ ಇಚ್ಛೆ ಇದೆ; ಆರ್‌ಎಸ್‌ಎಸ್ ಕುಮ್ಮಕ್ಕಿನಲ್ಲಿ ಬಿಜೆಪಿಯು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಭಾರೀ ದೊಡ್ಡ ದಂಗೆ – ದೊಂಬಿ ನಡೆಸುವ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.
-ಉದಯವಾಣಿ
Comments are closed.