ರಾಷ್ಟ್ರೀಯ

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಸ್‌ಗಳಲ್ಲಿನ್ನು ಪ್ಯಾನಿಕ್‌ ಬಟನ್‌ ಕಡ್ಡಾಯ

Pinterest LinkedIn Tumblr

222

ಹೊಸದಿಲ್ಲಿ: ಇನ್ನು ಮುಂದೆ ದೇಶಾದ್ಯಂತ ಸಾರ್ವಜನಿಕ ಸಾರಿಗೆ ಬಸ್‌ಗಳು ಅಪಾಯದ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ತುರ್ತು ಕರೆಗುಂಡಿಗಳು, ಸಿಸಿ ಟಿವಿ ಕ್ಯಾಮರಾ ಮತ್ತು ಜಿಪಿಎಸ್‌ ಸಾಧನಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿದ್ದು, ಜೂ. 2ರಿಂದ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರ ಸುರಕ್ಷತೆಗಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ತುರ್ತು ಕರೆಗುಂಡಿ (ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌), ಸಿಸಿ ಕ್ಯಾಮೆರಾ ಮತ್ತು ಜಿಪಿಎಸ್‌ ಆಧರಿತ ವಾಹನದ ಜಾಡು ತಿಳಿಯುವ ಉಪಕರಣ ಅಳವಡಿಕೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ, ಈ ಎಲ್ಲಾ ಸಾಧನಗಳನ್ನು ಬಸ್‌ ನಿರ್ಮಾಣದ ಹಂತದಲ್ಲೇ ಅಳವಡಿಸಬೇಕು ಎಂದು ಸಚಿವರು ತಿಳಿಸಿದರು.

ರಾಜಸ್ಥಾನ ರಸ್ತೆ ಸಾರಿಗೆ ಸಂಸ್ಥೆ ತುರ್ತು ಕರೆಗಂಟೆ ಮತ್ತು ಸಿಸಿ ಟಿವಿ ಕ್ಯಾಮೆರಾ ಅವಳಡಿಸಿದ 10 ಲಕ್ಸುರಿ ಮತ್ತು 10 ಸಾಮಾನ್ಯ ಬಸ್‌ಗಳ ಸಂಚಾರವನ್ನು ಆರಂಭಿಸುವ ಪೈಲಟ್‌ ಯೋಜನೆಗೆ ಸಚಿವರು ಚಾಲನೆ ನೀಡಿದರು.

ಯಾವುದಕ್ಕೆ ಕಡ್ಡಾಯ?
23ಕ್ಕಿಂತ ಹೆಚ್ಚು ಪ್ರಯಾಣಿಕ ಸಾಮರ್ಥ್ಯ‌ ಹೊಂದಿರುವ ಎಲ್ಲ ಸಾರ್ವಜನಿಕ ಸಾರಿಗೆ ವಾಹನಗಳು.

ಅಧಿಸೂಚನೆ ಯಾವಾಗ?
ಜೂನ್‌ 2.

ನಿಗಾ ಕಾರ್ಯಾಚರಣೆ ಹೇಗೆ?
* ಬಸ್‌ನಲ್ಲಿ ಅಳವಡಿಸಿದ ಸಿಸಿ ಟಿವಿಗಳು ಜಿಪಿಎಸ್‌ ಸಿಸ್ಟಂಗೆ ಸಂಪರ್ಕ ಹೊಂದಿದ್ದು, ಅವುಗಳನ್ನು ಸ್ಥಳೀಯ ಪೊಲೀಸ್‌ ಕಂಟ್ರೋಲ್‌ ರೂಂನಲ್ಲಿ ವೀಕ್ಷಿಸಲಾಗುತ್ತದೆ.

* ಯಾವುದೇ ಅಹಿತಕರ ಘಟನೆ ನಡೆದಾಗ ಮಹಿಳೆ ತುರ್ತು ಕರೆ ಗುಂಡಿ ಒತ್ತಲು ಶಕ್ತರಾದರೆ, ಮಾಹಿತಿ ಜಿಪಿಎಸ್‌ ಮೂಲಕ ಹತ್ತಿರದ ಪೊಲೀಸ್‌ ಠಾಣೆಗೆ ಹೋಗುತ್ತದೆ.

* ಒಮ್ಮೆ ತುರ್ತು ಸ್ಥಿತಿಯ ಸಿಗ್ನಲ್‌ ಸಿಕ್ಕಿದ ಕೂಡಲೇ ಬಸ್‌ನೊಳಗಿನ ಲೈವ್‌ ದೃಶ್ಯಗಳು ಸೆಂಟ್ರಲ್‌ ಕಂಟ್ರೋಲ್‌ ರೂಮ್‌ನಲ್ಲಿ ಕಾಣಿಸಲಾರಂಭಿಸುತ್ತವೆ.

* ಒಂದು ವೇಳೆ ವಾಹನ ನಿಗದಿತ ಮಾರ್ಗವನ್ನು ಬದಲಿಸಿ ಬೇರೆ ದಾರಿಯಲ್ಲಿ ಸಾಗಿದರೆ ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಕೂಡಲೇ ತನ್ನ ಪ್ರಯಾಣದ ಹಾದಿಯ ಮಾಹಿತಿಯನ್ನು ಕಂಟ್ರೋಲ್‌ ರೂಮ್‌ಗೆ ನೀಡುತ್ತದೆ.

Comments are closed.