ರಾಷ್ಟ್ರೀಯ

ಈ ವರ್ಷ `ನೀಟ್’ ವಿನಾಯ್ತಿಗೆ ಸುಗ್ರೀವಾಜ್ಞೆ

Pinterest LinkedIn Tumblr

pranab

ನವದೆಹಲಿ, ಮೇ ೨೩ – ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿಗಳಿಗೆ ಏಕರೀತಿಯ ಪ್ರವೇಶ ಪರೀಕ್ಷೆ (ನೀಟ್)ಯಿಂದ ರಾಜ್ಯ ಮಂಡಲಿಗಳನ್ನು ಹೊರಗಿಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದಾರೆ.
ಸುಗ್ರೀವಾಜ್ಞೆಯ ಪರಿಣಾಮವಾಗಿ ಕರ್ನಾಟಕದಲ್ಲಿ ಸಿ.ಇ.ಟಿ. ಪರೀಕ್ಷೆಗೆ ಅಡೆತಡೆ ನಿವಾರಣೆಯಾಗಿದೆ. ಸಿಇಟಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ.
ರಾಷ್ಟ್ರಪತಿಯವರು ಕೇಳಿದ್ದ ಎಲ್ಲಾ ಮಾಹಿತಿ ಕಡತಗಳೊಂದಿಗೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಬಂದ ನಂತರ ಸುಗ್ರೀವಾಜ್ಞೆಗೆ ಪ್ರಣಬ್ ಮುಖರ್ಜಿ ಸಹಿ ಹಾಕಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.
`ನೀಟ್’ ಕುರಿತಂತೆ ರಾಷ್ಟ್ರಪತಿಗಳು ಕೇಳಿದ್ದ ಸ್ಪಷ್ಟನೆಗಳಿಗೆ ಉತ್ತರಿಸಲು ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಇಂದು ಬೆಳಿಗ್ಗೆ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರಪತಿಗಳ ಸಚಿವಾಲಯಕ್ಕೆ ಆಗಮಿಸಿದರು.
ಸುಗ್ರೀವಾಜ್ಞೆಯನ್ನು ಕಳೆದ ಶನಿವಾರದಂದೇ ರಾಷ್ಟ್ರಪತಿಗಳಿಗೆ ಕಳುಹಿಸಿದ್ದು, ಅಂದು ಅವರು ಚೀನಾಕ್ಕೆ 4 ದಿನಗಳ ಅಧಿಕೃತ ಪ್ರವಾಸಕ್ಕೆ ತೆರಳಿದ್ದರು.
ಈ ತಿಂಗಳ ಮೊದಲಲ್ಲಿ ಉತ್ತರಾಖಂಡ ಕುರಿತ ಸುಗ್ರೀವಾಜ್ಞೆಯನ್ನೂ ಸುಪ್ರೀಂಕೋರ್ಟ್ ತಿರುವು -ಮುರುವು ಮಾಡಿದ ನಂತರ ರಾಷ್ಟ್ರಪತಿಗಳ ಸಚಿವಾಲಯ ಈ ಬಾರಿ ಬಹಳ ಎಚ್ಚರಿಕೆಯಿಂದ ಹಲವಾರು ಪ್ರಶ್ನೆಗಳನ್ನು ಕೇಳಿ, ಸ್ಪಷ್ಟನೆಗಳನ್ನು ಬಯಸಿ ನಿರ್ಧಾರ ಕೈಗೊಂಡಿತು. ಏಕೆಂದರೆ ಈ ಬಾರಿಯೂ ಏಕರೂಪ ಪ್ರವೇಶ ಪರೀಕ್ಷೆ (ನೀಟ್)ಯನ್ನು ರಾಜ್ಯ ಮಂಡಲಿಗಳು ಸೇರಿದಂತೆ ಸರ್ಕಾರೀ ಹಾಗೂ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.
ಆರೋಗ್ಯ ಸಚಿವ ಜೆ.ಪಿ. ನಡ್ಡಾ ನಿನ್ನೆ ರಾಷ್ಟ್ರಪತಿಗೆ ರಾಜ್ಯ ಮಂಡಲಿಗಳ ವಿವಿಧ ಪರೀಕ್ಷೆಗಳು, ಸಿಲಬಸ್‌ಗಳು ಮತ್ತು ಪ್ರಾದೇಶಿಕ ಭಾಷಾ ವಿಷಯದ ಬಗೆಗಿನ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಟ್ಟಿದ್ದರು.
ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ತರಗತಿಗಳಿಗೆ ಸಾಮಾನ್ಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಸಚಿವ ನಡ್ಡಾ ವಿವರ ನೀಡಿ ಹೋದ ನಂತರ ಕಡತಗಳೊಂದಿಗೆ ನಿನ್ನೆ ಹಿಂದಿರುಗಿದ್ದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ರಾಷ್ಟ್ರಪತಿ ಮತ್ತಷ್ಟು ವಿವರ ಕೋರಿದ ಕಾರಣ ಇಂದು ಬೆಳಿಗ್ಗೆ ಹಿಂದಿರುಗಿ ರಾಷ್ಟ್ರಪತಿಗೆ ಹೆಚ್ಚುವರಿ ಮಾಹಿತಿ ನೀಡಿದರು.
2016ರ ನೀಟ್ ಪರೀಕ್ಷೆಗೆ ಮುಖ್ಯವಾಗಿ ಮೂರು ಆಕ್ಷೇಪಗಳಿದ್ದವು. ಅವೆಂದರೆ, ಬಹುತೇಕ ವಿದ್ಯಾರ್ಥಿಗಳು ಹಳೇ ಪಠ್ಯಗಳ ಪ್ರಕಾರ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದರು. ಅವರಲ್ಲಿ ಬಹಳಷ್ಟು ಜನ ಪ್ರಾದೇಶಿಕ ಭಾಷಾ ಮಂಡಲಿಯವರು ಮತ್ತು ಹೊಸ ಪರೀಕ್ಷಾ ರೂಪಕ್ಕೆ ಹೊಂದಿಕೊಳ್ಳಲು ಇದ್ದ ಕಾಲಾವಕಾಶ ತೀರಾ ಕಡಿಮೆ.
ನೀಟ್ ಪರೀಕ್ಷೆಗಳಿಂದ ರಾಜ್ಯ ಮಂಡಲಿಗಳನ್ನು ದೂರವಿಡುವ ಬಗ್ಗೆ ರಾಷ್ಟ್ರಪತಿ ಕಾನೂನು ಸಲಹೆ ನೀಡುವಂತೆ ಸೂಚಿಸಿದ್ದರು.
ಎಲ್ಲಾ ಸರ್ಕಾರೀ ಕಾಲೇಜುಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನೀಟ್ ಪರೀಕ್ಷೆ ಅನ್ವಯಿಸುತ್ತದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಭಾಗಶಃ ಬದಲಿಸುವ ಉದ್ದೇಶ ಸುಗ್ರೀವಾಜ್ಞೆಯದಾಗಿತ್ತು.
ಇತ್ತೀಚಿನ ಆರೋಗ್ಯ ಸಚಿವರುಗಳ ಸಭೆಯಲ್ಲಿ ನೀಟ್ ಪರೀಕ್ಷೆಗೆ 15ಕ್ಕೂ ಹೆಚ್ಚು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು.
ಈ ವರ್ಷದಿಂದಲೇ ನೀಟ್ ಪರೀಕ್ಷೆಗಳನ್ನು ನಡೆಸಲು ಕಷ್ಟವಾಗುತ್ತದೆ ಎಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದ ಕಾರಣ ಸರ್ಕಾರ ಸುಗ್ರೀವಾಜ್ಞೆಗೆ ಹಾದಿ ಹಿಡಿಯಬೇಕಾಯಿತು.
ನೀಟ್‌ನ ಮೊದಲ ಹಂತದ ಪರೀಕ್ಷೆ ಮೇ 1 ರಂದು ಈಗಾಗಲೇ ನ‌ಡೆದಿದ್ದು, 2ನೇ ಹಂತದ ಪರೀಕ್ಷೆ ಜು. 24 ರಂದು ಎಂದು ನಿಗದಿಯಾಗಿತ್ತು. ಈಗ ಸುಗ್ರೀವಾಜ್ಞೆ ಹೊರಬಿದ್ದಿ ನಂತರ ವಿದ್ಯಾರ್ಥಿಗಳು ಜು. 24ರ ನೀಟ್ ಪರೀಕ್ಷೆ ಬರೆಯುವ ಅಗತ್ಯವಿಲ್ಲ.
ಆದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪದ ಪ್ರವೇಶ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯಬೇಕಾಗುತ್ತದೆ.
ನೀಟ್ ಪರೀಕ್ಷೆ ಸರ್ಕಾರೀ ಹಾಗೂ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯಿಸಲಿದೆ.

Comments are closed.