ಮನೋರಂಜನೆ

ಪ್ಲೇ ಆಫ್‌ ಹಂತದ ಹೊಸ್ತಿಲಿಗೆ ಬಂದು ನಿಂತ ಲಯನ್ಸ್ ! ಕೆಕೆಆರ್ ಗೆ ಸೋಲು

Pinterest LinkedIn Tumblr

match

ಕಾನ್ಪುರ: ಮಧ್ಯಮವೇಗಿ ಡ್ವೇನ್ ಸ್ಮಿತ್ (8ಕ್ಕೆ4) ಅವರ ಅಮೋಘ ಬೌಲಿಂಗ್‌ ಮತ್ತು ನಾಯಕ ಸುರೇಶ್ ರೈನಾ (ಅಜೇಯ 53) ಅವರ ನೆರವಿನಿಂದ ಗುಜರಾತ್ ಲಯನ್ಸ್ ತಂಡವು ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ 6 ವಿಕೆಟ್‌ಗಳಿಂದ ಜಯಿಸಿತು.

ಇದರೊಂದಿಗೆ ಲಯನ್ಸ್‌ ತಂಡವು ಪ್ಲೇ ಆಫ್‌ ಹಂತದ ಹೊಸ್ತಿಲಿಗೆ ಬಂದು ನಿಂತಿತು. ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಟಾಸ್ ಸೋತ ಕೋಲ್ಕತ್ತ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಸ್ಮಿತ್ ಅವರ (4–0–8–4) ಶಿಸ್ತಿನ ದಾಳಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 124 ರನ್‌ಗಳ ಅಲ್ಪಮೊತ್ತ ಗಳಿಸಿತು.

ನಂತರ ಗುರಿ ಬೆನ್ನತ್ತಿದ ಲಯನ್ಸ್ ತಂಡವು 13.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 125 ರನ್‌ಗಳನ್ನು ಗಳಿಸಿ ಗೆದ್ದಿತು. ಒಟ್ಟು 13 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿರುವ ಲಯನ್ಸ್‌ ತಂಡವು ಐದರಲ್ಲಿ ಸೋತಿದೆ. ಈ ಗೆಲುವಿನಿಂದಾಗಿ ಸುರೇಶ್ ರೈನಾ ಬಳಗವು 16 ಅಂಕಗಳೊಂದಿಗೆ ಪಾಯಿಂಟ್‌ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಏಳು ಗೆಲುವು, ಆರು ಸೋಲು ಅನುಭವಿಸಿರುವ ರೈಡರ್ಸ್ ತಂಡವು ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಬುಧವಾರ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಭರ್ಜರಿ ಜಯ ದಾಖಲಿಸಿ ಎರಡನೇ ಸ್ಥಾನ ಪಡೆದಿದ್ದ ಆರ್‌ಸಿಬಿ ತಂಡವು ಮೂರನೇ ಸ್ಥಾನಕ್ಕೆ ಇಳಿಯಿತು.

ಸ್ಮಿತ್ ದಾಳಿಯ ವೈಭವ: ಬ್ಯಾಟ್ಸ್‌ಮನ್‌ಗಳ ಅಬ್ಬರವೇ ಮೇಲುಗೈ ಸಾಧಿಸಿರುವ ಐಪಿಎಲ್ ಟೂರ್ನಿಯಲ್ಲಿ ಸ್ಮಿತ್ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದರು. ವೆಸ್ಟ್‌ ಇಂಡೀಸ್ ಆಲ್‌ರೌಂಡರ್ ಸ್ಮಿತ್ ಲೆಗ್‌ಕಟರ್ ಮತ್ತು ನಿಧಾನಗತಿಯ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದರು.

ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (25, 19ಎ, 3ಬೌಂ, 1ಸಿ) ಮತ್ತು ಗೌತಮ್ ಗಂಭೀರ್ (8 ರನ್) ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ನಾಲ್ಕನೇ ಓವರ್‌ನಲ್ಲಿ ತಂಡದ ಮೊತ್ತವು 23 ರನ್‌ಗಳಾಗಿದ್ದಾಗ ಗಂಭೀರ್ ರನ್‌ಔಟ್ ಆದರು. ಐದನೇ ಓವರ್‌ನಲ್ಲಿ ಬೌಲಿಂಗ್ ಆರಂಭಿಸಿದ ಸ್ಮಿತ್ ತಮ್ಮ ತೋಳ್ಬಲ ಮೆರೆದರು.

ಬಲಗೈ ಮಧ್ಯಮವೇಗಿಯ ನೇರ ಎಸೆತವನ್ನು ಸಿಕ್ಸರ್‌ಗೆ ಎತ್ತಲು ಪ್ರಯತ್ನಿಸಿದ ಮನೀಷ್ ಪಾಂಡೆ ದಂಡ ತೆತ್ತರು. ಫೀಲ್ಡರ್ ಸುರೇಶ್ ರೈನಾ ಪಡೆದ ಕ್ಯಾಚ್‌ಗೆ ಹೊರನಡೆದರು. ತಮ್ಮ ನಂತರದ ಓವರ್‌ನಲ್ಲಿ ಸ್ಮಿತ್ ಹಾಕಿದ ಎಸೆತವನ್ನು ಕಟ್ ಮಾಡಲು ಯತ್ನಿಸಿದ ಉತ್ತಪ್ಪ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ಕೊಟ್ಟರು. ತಂಡದ ಮೊತ್ತವು ಇನ್ನೂ 50ರ ಗಡಿಯನ್ನೂ ಮುಟ್ಟಿರಲಿಲ್ಲ.

ಹನ್ನೊಂದು ರನ್‌ ಗಳಿಸಿ ಭರವಸೆ ಮೂಡಿಸಿದ್ದ ಪಿಯೂಷ್ ಚಾವ್ಲಾ ಅವರನ್ನೂ ಸ್ಮಿತ್ ಹತ್ತನೇ ಓವರ್‌ನಲ್ಲಿ ಕ್ಲೀನ್‌ಬೌಲ್ಡ್ ಮಾಡಿ ಸಂಭ್ರಮಿಸಿದರು. ಇದರಿಂತದ ತಂಡದ ರನ್‌ ಗಳಿಕೆ ನಿಧಾನಗೊಂಡಿತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಯೂಸುಫ್ ಪಠಾಣ್ (36; 36ಎ, 3ಬೌಂ ,1ಸಿ) ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು.

ಆದರೆ, ಶಕೀಬ್ ಅಲ್ ಹಸನ್ ಕೇವಲ 3 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ (17 ರನ್) ಮತ್ತು ಜಾಸನ್ ಹೋಲ್ಡರ್ (13 ರನ್) ಅಲ್ಪ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು 124 ರನ್‌ ಗಳಿಸಲು ಸಾಧ್ಯವಾಯಿತು.

ರೈನಾ ಆರ್ಭಟ: ಆದರೆ ಗುರಿ ಬೆನ್ನತ್ತಿದ ಲಯನ್ಸ್‌ ತಂಡದ ಆರಂಭ ಚೆನ್ನಾಗಿರಲಿಲ್ಲ. ಅಂಕಿತ್ ರಜಪೂತ್ ಅವರ ಮೊದಲ ಎಸೆತದಲ್ಲಿಯೇ ಡ್ವೆನ್ ಸ್ಮಿತ್ ವಿಕೆಟ್‌ಕೀಪರ್ ರಾಬಿನ್ ಉತ್ತಪ್ಪ ಅವರಿಗೆ ಕ್ಯಾಚಿತ್ತರು. ಬ್ರೆಂಡನ್ ಮೇಕ್ಲಮ್ ಕೇವಲ ಆರು ರನ್‌ ಗಳಿಸಿ ಸುನಿಲ್ ನಾರಾಯಣ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಕ್ರೀಸ್‌ಗೆ ಬಂದ ನಾಯಕ ಸುರೇಶ್ ರೈನಾ (ಅಜೇಯ 53; 36ಎ, 7ಬೌಂ, 1ಸಿ) ತಂಡಕ್ಕೆ ಗೆಲುವಿನ ಹಾದಿ ತೋರಿಸಿದರು. ಮಾರ್ನೆ ಮಾರ್ಕೆಲ್‌ ಎಸೆತದಲ್ಲಿ ಬೌಲ್ಡ್‌ ಆದ ದಿನೇಶ್ ಕಾರ್ತಿಕ್ 12 ರನ್ ಗಳಿಸಿದರು.

ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ರೈನಾ ಅವರೊಂದಿಗೆ 59 ರನ್‌ಗಳನ್ನು ಗಳಿಸಿದ ಆ್ಯರನ್ ಫಿಂಚ್ ಅವರು ರನ್ ಔಟ್ ಆದರು. ಆಗ ತಂಡದ ಮೊತ್ತವು 100ರ ಗಡಿ ಸಮೀಪಿಸಿತ್ತು. ರೈನಾ ಜೊತೆಗೂಡಿದ ರವೀಂದ್ರ ಜಡೇಜ (ಔಟಾಗದೆ 11) ತಂಡದ ಕುಸಿತವನ್ನು ತಡೆದರು. ನಾಕೌಟ್ ಹಂತ ತಲುಪುವ ಕನಸು ಜೀವಂತವಾಗಿ ಉಳಿಯಿತು.

‘ಸ್ಕೋರ್‌ಕಾರ್ಡ್‌’
ಕೋಲ್ಕತ್ತ ನೈಟ್‌ ರೈಡರ್ಸ್‌ 8ಕ್ಕೆ 124(20 ಓವರ್‌ಗಳಲ್ಲಿ)
ರಾಬಿನ್‌ ಉತ್ತಪ್ಪ ಸಿ. ದಿನೇಶ್ ಕಾರ್ತಿಕ್‌ ಬಿ. ಡ್ವೇನ್‌ ಸ್ಮಿತ್‌ 25
ಗೌತಮ್‌ ಗಂಭೀರ್‌ ರನ್‌ ಔಟ್‌ (ಶಹಬಜ್‌ ಜಕಾತಿ) 08
ಮನೀಷ್‌ ಪಾಂಡೆ ಸಿ. ಸುರೇಶ್‌ ರೈನಾ ಬಿ. ಡ್ವೇನ್ ಸ್ಮಿತ್‌ 01
ಪಿಯೂಷ್‌ ಚಾವ್ಲಾ ಬಿ. ಡ್ವೇನ್ ಸ್ಮಿತ್‌ 11
ಯೂಸುಫ್‌ ಪಠಾಣ್‌ ಸಿ. ಸುರೇಶ್‌ ರೈನಾ ಬಿ. ಧವಳ್‌ ಕುಲಕರ್ಣಿ 36
ಶಕೀಬ್‌ ಅಲ್‌ ಹಸನ್‌ ಸಿ. ಏಕಲವ್ಯ ದ್ವಿವೇದಿ ಬಿ. ಡ್ವೇನ್ ಸ್ಮಿತ್‌ 03
ಸೂರ್ಯಕುಮಾರ್‌ ಯಾದವ್‌ ಸಿ. ಧವಳ್‌ ಕುಲಕರ್ಣಿ ಬಿ. ಶಹಬಜ್‌ ಜಕಾತಿ 17
ಜಾಸನ್‌ ಹೋಲ್ಡರ್‌ ಸಿ. ಆ್ಯರನ್‌ ಫಿಂಚ್‌ ಬಿ. ಡ್ವೇನ್‌ ಬ್ರಾವೊ 13
ಸುನಿಲ್‌ ನಾರಾಯಣ್‌ ಔಟಾಗದೆ 02
ಮಾರ್ನೆ ಮಾರ್ಕಲ್‌ ಔಟಾಗದೆ 01

ಇತರೆ: (ಲೆಗ್‌ ಬೈ–2, ವೈಡ್‌–5) 07

ವಿಕೆಟ್‌ ಪತನ: 1–23 (ಗಂಭೀರ್; 3.1), 2–34 (ಮನೀಷ್‌; 4.2), 3–44 (ಉತ್ತಪ್ಪ; 6.2), 4–55 (ಚಾವ್ಲಾ; 9.2), 5–61 (ಶಕೀಬ್‌; 11.3), 6–102 (ಯಾದವ್‌; 16.5), 7–120 (ಯೂಸುಫ್‌; 18.2), 8–122 (ಹೋಲ್ಡರ್‌; 19.3).

ಬೌಲಿಂಗ್‌: ಪ್ರವೀಣ್‌ ಕುಮಾರ್‌ 2–0–12–0, ಧವಳ್‌ ಕುಲಕರ್ಣಿ 4–0–34–1, ಡ್ವೇನ್‌ ಸ್ಮಿತ್‌ 4–0–8–4, ಡ್ವೇನ್‌ ಬ್ರಾವೊ 4–0–29–1, ಶಹಬಜ್‌ ಜಕಾತಿ 4–0–22–1, ರವೀಂದ್ರ ಜಡೇಜ 2–0–17–0.

ಗುಜರಾತ್‌ ಲಯನ್ಸ್‌ 4ಕ್ಕೆ 125 (13.3 ಓವರ್‌ಗಳಲ್ಲಿ)
ಡ್ವೇನ್‌ ಸ್ಮಿತ್‌ ಸಿ. ರಾಬಿನ್‌ ಉತ್ತಪ್ಪ ಬಿ. ಅಂಕಿತ್‌ ರಜಪೂತ್ 00
ಬ್ರೆಂಡನ್‌ ಮೆಕ್ಲಮ್‌ ಎಲ್‌ಬಿಡಬ್ಲ್ಯು ಬಿ. ಸುನಿಲ್‌ ನಾರಾಯಣ್‌ 06
ಸುರೇಶ್‌ ರೈನಾ ಔಟಾಗದೆ 53
ದಿನೇಶ್ ಕಾರ್ತಿಕ್ ಬಿ. ಮಾರ್ನೆ ಮಾರ್ಕೆಲ್‌ 12
ಆ್ಯರನ್‌ ಫಿಂಚ್‌ ರನ್‌ ಔಟ್‌ (ಅಂಕಿತ್‌/ಉತ್ತಪ್ಪ) 26
ರವೀಂದ್ರ ಜಡೇಜ ಔಟಾಗದೆ 11

ಇತರೆ: (ಲೆಗ್‌ ಬೈ–1, ವೈಡ್‌–16) 17

ವಿಕೆಟ್‌ ಪತನ: 1–0 (ಸ್ಮಿತ್‌; 0.1), 2–18 (ಮೆಕ್ಲಮ್‌; 1.2), 3–38 (ಕಾರ್ತಿಕ್‌; 3.5), 4–97 (ಫಿಂಚ್‌; 9.5).

ಬೌಲಿಂಗ್‌: ಅಂಕಿತ್‌ ರಜಪೂತ್‌ 3–0–35–1, ಸುನಿಲ್‌ ನಾರಾಯಣ್‌ 4–0–30–1, ಮಾರ್ನೆ ಮಾರ್ಕಲ್‌ 3.3–0–39–1, ಜಾಸನ್ ಹೋಲ್ಡರ್‌ 2–0–14–0, ಯೂಸುಫ್‌ ಪಠಾಣ್‌ 1––0–6–0.

ಫಲಿತಾಂಶ: ಲಯನ್ಸ್‌ ತಂಡಕ್ಕೆ 6 ವಿಕೆಟ್‌ ಜಯ.

ಪಂದ್ಯ ಶ್ರೇಷ್ಠ: ಡ್ವೇನ್‌ ಸ್ಮಿತ್‌

ಇದೇ ವೇಳೆ ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಅವರ ತಂಡ ಮತ್ತು ರಾಜ್ಯ ಘಟವನ್ನು ಪ್ರಧಾನಿ ಅಭಿನಂದಿಸಿದರು.

ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು, 126 ಸ್ಥಾನಗಳ ಪೈಕಿ ಬಿಜೆಪಿ 86ರಲ್ಲಿ ಗೆಲ್ಲುವ ಮೂಲಕ ಈಶಾನ್ಯ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರುತ್ತಿದೆ.

Comments are closed.