ರಾಷ್ಟ್ರೀಯ

ನರೇಗಾ: ₹ 12 ಸಾವಿರ ಕೋಟಿ ಬಿಡುಗಡೆ

Pinterest LinkedIn Tumblr

56757578ನವದೆಹಲಿ(ಪಿಟಿಐ): ಬರಪೀಡಿತ ರಾಜ್ಯಗಳಿಗೆ ಸಕಾಲದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ(ನರೇಗಾ) ಹಣ ನೀಡದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಶನಿವಾರ ಕೇಂದ್ರ ₹ 12,320 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಸಚಿವಾಲಯ ಈ ಯೋಜನೆಗೆ ಅತಿ ದೊಡ್ಡ ಮೊತ್ತವನ್ನು ಬಿಡುಗಡೆ ಮಾಡಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ಸಚಿವಾಲಯ ರಾಜ್ಯಗಳಿಗೆ ₹ 12,230 ಕೋಟಿ ಬಿಡುಗಡೆ ಮಾಡಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಬೀರೇಂದ್ರ ಸಿಂಗ್ ತಿಳಿಸಿದ್ದಾರೆ.
ಈಗ ಬಿಡುಗಡೆ ಮಾಡಿರುವ ಹಣ 2015–16ನೇ ಸಾಲಿನ ಕೂಲಿ ಬಾಕಿ ಪಾವತಿ ಹಾಗೂ 2016–17ನೇ ಸಾಲಿನ ಹೊಸ ಆರ್ಥಿಕ ವರ್ಷದಲ್ಲಿ ಯೋಜನೆ ಅಡಿ ಕೆಲಸ ಕೈಗೊಳ್ಳಲು ನೆರವಾಗಲಿದೆ. ಯೋಜನೆಗೆ ಅಗತ್ಯ ಎಲ್ಲ ನೆರವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
‘ಸ್ವರಾಜ್‌ ಅಭಿಯಾನ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ನರೇಗಾ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಸಮರ್ಪಕ ಜಾರಿಗೆ ವಿಫಲವಾಗಿರುವ ಮತ್ತು ಬರಪೀಡಿತ ರಾಜ್ಯಗಳಿಗೆ ಸಕಾಲದಲ್ಲಿ ಪರಿಹಾರ ನೀಡದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿತ್ತು. ‘ಒಂಬತ್ತು ರಾಜ್ಯಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುವಂತಿಲ್ಲ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್ ಪಿಂಕಿ ಆನಂದ್‌ ಮತ್ತು ಕೇಂದ್ರ ಸರ್ಕಾರದ ಇತರ ಅಧಿಕಾರಿಗಳಿಗೆ ಎಚ್ಚರಿಸಿತ್ತು.
₹ 7,983 ಕೋಟಿ ಹಣ ಬಿಡುಗಡೆ ಮತ್ತು ನರೇಗಾ, ಆಹಾರ ಭದ್ರತಾ ಕಾಯ್ದೆ ಜಾರಿಗೆ ತೆಗೆದುಕೊಂಡ ಕ್ರಮಗಳ ವಿವರವಾದ ಪ್ರಮಾಣಪತ್ರವನ್ನು ಗುರುವಾರದ ಒಳಗೆ ಸಲ್ಲಿಸುವಂತೆ ಪೀಠ ಕಾನೂನು ಅಧಿಕಾರಿಗೆ ಸೂಚಿಸಿತು.

Write A Comment