ರಾಷ್ಟ್ರೀಯ

ಅಗ್ರಸ್ಥಾನದಲ್ಲಿ ಜೆಎನ್‌ಯು, ಹೈದರಾಬಾದ್‌ ವಿವಿ: ತಂತ್ರಜ್ಞಾನ ಸಂಸ್ಥೆಗಳ ಪೈಕಿ ಐಐಟಿ–ಎಂ ಗೆ 1ನೇ ಸ್ಥಾನ

Pinterest LinkedIn Tumblr

JNUUUನವದೆಹಲಿ (ಪಿಟಿಐ): ವಿವಾದಗಳಿಂದ ಸುದ್ದಿಯಾಗಿದ್ದ ದೆಹಲಿಯ ಜವಹಾರಲಾಲ್‌ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಮತ್ತು ಹೈದರಾಬಾದ್‌ ವಿಶ್ವವಿದ್ಯಾನಿಲಯಗಳು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ.
ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ರ್ಯಾಂಕಿಂಗ್‌ ಫ್ರೇಮ್‌ವರ್ಕ್‌ (ಎನ್‌ಐಆರ್‌ಎಫ್‌) ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ.
ತಂತ್ರಜ್ಞಾನ ಸಂಸ್ಥೆಗಳ ಪೈಕಿ ಚೆನ್ನೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ –ಮದ್ರಾಸ್‌) ಮತ್ತು ನಿರ್ವಹಣಾ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂಬಿ) ಪ್ರಥಮ ಸ್ಥಾನವನ್ನು ಪಡೆದುಕೊಂಡಿವೆ.
ತಂತ್ರಜ್ಞಾನ ಸಂಸ್ಥೆಗಳ ವಿಭಾಗದಲ್ಲಿ ಐಐಟಿ ಮುಂಬೈ ಎರಡನೇ ಸ್ಥಾನ ಪಡೆದರೆ, ಐಐಟಿ ಖರಗ್‌ಪುರ, ಐಐಟಿ ದೆಹಲಿ ಅದರ ಹಿಂದಿನ ಸ್ಥಾನದಲ್ಲಿವೆ.
ಔಷಧೀಯ ಸಂಸ್ಥೆಗಳ ವಿಭಾಗದಲ್ಲಿ ಮಣಿಪಾಲ್‌ ಕಾಲೇಜ್‌ ಆಫ್‌ ಫಾರ್ಮಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಎನ್‌ಐಆರ್‌ಎಫ್‌ ಸಂಸ್ಥೆಯು ದೇಶದ 3,500 ಶಿಕ್ಷಣ ಸಂಸ್ಥೆಗಳನ್ನು ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ರ್ಯಾಂಕಿಂಗ್‌ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸೋಮವಾರ ಬಿಡುಗಡೆ ಮಾಡಿದರು.
ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಮುಂಬೈನ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಟೆಕ್ನಾಲಜಿ (ಐಸಿಟಿ) ಅಗ್ರಸ್ಥಾನದಲ್ಲಿವೆ.
ವರದಿ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನಿ, ‘ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ರ್ಯಾಕಿಂಗ್‌ ವ್ಯವಸ್ಥೆಯಿಂದ ಯಾವ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದಂತಾಗುತ್ತದೆ. ಇನ್ನಷ್ಟು ವಿಭಾಗಗಳ ಶೈಕ್ಷಣಿಕ ಸಂಸ್ಥೆಗಳನ್ನು ಎನ್‌ಐಆರ್‌ಎಫ್‌ ಸಮೀಕ್ಷೆಗೆ ಒಳಪಡಿಸಲಾಗುವುದು’ ಎಂದರು.

Write A Comment