ರಾಷ್ಟ್ರೀಯ

ತೆರಿಗೆ ತಪ್ಪಿಸುವ ಸಾಹಸಕ್ಕೆ ತಕ್ಕ ಶಾಸ್ತಿ : ಜೇಟ್ಲಿ ಎಚ್ಚರಿಕೆ

Pinterest LinkedIn Tumblr

Jaitely-@-CIIನವದೆಹಲಿ (ಪಿಟಿಐ): ವಿದೇಶಗಳಲ್ಲಿ ಇಟ್ಟ ಅಕ್ರಮ ಸಂಪತ್ತು ಘೋಷಣೆಗೆ ಕಳೆದ ವರ್ಷ ಸರ್ಕಾರ ಪ್ರಕಟಿಸಿರುವ ಕ್ಷಮಾದಾನ ಯೋಜನೆಯ ಲಾಭ ಪಡೆಯದೇ, ತೆರಿಗೆ ತಪ್ಪಿಸುವಂಥ ‘ಎದೆಗಾರಿಕೆ’ ತೋರಿದರೆ ತಕ್ಕ ದಂಡ ತೆರಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಸಿದ್ದಾರೆ.
ಭಾರತೀಯ ಉದ್ಯಮ ಒಕ್ಕೂಟದ(ಸಿಐಐ) ವಾರ್ಷಿಕ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದೇಶಗಳಲ್ಲಿ ಅಕ್ರಮ ಸಂಪತ್ತು ಇಟ್ಟಿರುವವರ ನಿಗಾ ವಹಿಸಲು 2017ರ ವೇಳೆಗೆ ವ್ಯವಸ್ಥೆಯೊಂದರ ಜಾರಿಗೆ ಜಾಗತಿಕ ಕ್ರಮಗಳು ನಡೆಯುತ್ತಿವೆ. ಆ ಬಳಿಕ ಸಂಪತ್ತನ್ನು ಅಡಗಿಸಿಡುವುದು ತುಂಬಾ ಕಷ್ಟವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಪನಾಮಾದಲ್ಲಿ 500ಕ್ಕೂ ಅಧಿಕ ಭಾರತೀಯರು ಅಕ್ರಮವಾಗಿ ಸಂಪತ್ತನ್ನು ಇಟ್ಟಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಜೇಟ್ಲಿ ಹೀಗೆ ಎಚ್ಚರಿಸಿದ್ದಾರೆ.
‘ಜಾರಿಯಲ್ಲಿರುವ ಕ್ಷಮಾದಾನ ಯೋಜನೆಯ ಪ್ರಯೋಜನ ಹಲವರು ಪಡೆದಿದ್ದಾರೆ. ಆದರೆ, ಇನ್ನೂ ಕೆಲವರು ಪಡೆದಂತಿಲ್ಲ. ಇಂದು ಮಾಧ್ಯಮ ವರದಿಗಳನ್ನು ನೋಡಿರುವೆ. ಅವು ಬರಿ ಭಾರತದ ಮೇಲೆ ಮಾತ್ರವೇ ಅಲ್ಲ, ವಿಶ್ವದ ಮೇಲೂ ಪರಿಣಾಮ ಬೀರುತ್ತಿವೆ. ಇದುವೇ ನಮಗೆಲ್ಲ ಕಟು ಎಚ್ಚರಿಕೆ ಎನಿಸುತ್ತದೆ’ ಎಂದು ನುಡಿದಿದ್ದಾರೆ.

Write A Comment