ರಾಷ್ಟ್ರೀಯ

ಸಂತಸ ಸಚಿವಾಲಯ, ಮಧ್ಯಪ್ರದೇಶ ದೇಶದಲ್ಲೇ ಪ್ರಥಮ : ಸಿಎಂ ಘೋಷಣೆ

Pinterest LinkedIn Tumblr

MP Chouhan-700ಭೋಪಾಲ್‌ : ಸಂತಸ ಮತ್ತು ನೆಮ್ಮದಿಯಿಂದ ಬದುಕಲು ಬಯಸುವಿರಾ ? ಹಾಗಿದ್ದರೆ ನಿಮಗೆ ಮಧ್ಯಪ್ರದೇಶವೇ ಸೂಕ್ತವಾದ ರಾಜ್ಯ ಎಂದೀಗ ಹೇಳಬೇಕಾಗಿದೆ. ಕಾರಣ : ದೇಶದಲ್ಲೇ ಮೊದಲು ಎಂಬಂತೆ ಮಧ್ಯಪ್ರದೇಶವು ‘ಸಂತಸ ಸಚಿವಾಲಯ’ವನ್ನು ಹೊಂದಲಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಅವರು “ಶೀಘ್ರದಲ್ಲೇ ಮಧ್ಯಪ್ರದೇಶವು ಸಂತಸ ಸಚಿವಾಲಯವನ್ನು ಹೊಂದಲಿದೆ’ ಎಂದು ಘೋಷಿಸಿದ್ದಾರೆ ಮತ್ತು ಈ ರೀತಿಯ ವಿನೂತನ ಸಚಿವಾಲಯವನ್ನು ಹೊಂದುವ ತಮ್ಮ ರಾಜ್ಯವು ದೇಶದಲ್ಲೇ ಮೊದಲ ರಾಜ್ಯ ಎನಿಸಲಿದೆ ಎಂದಿದ್ದಾರೆ.

ಜನರ ಸುಖ – ಸಂತೋಷ – ನೆಮ್ಮದಿಯನ್ನು ಅವರಲ್ಲಿರುವ ಐಹಿಕ ಸುಖ ಸಾಧನಗಳು ಮತ್ತು ಅಭಿವೃದ್ದಿಯಿಂದ ಮಾತ್ರವೇ ಅಳೆಯಲಾಗದು ಎಂಬ ವಿಚಾರ ಅಂಕಿ ಅಂಶಗಳಿಂದ ಶ್ರುತಪಟ್ಟಿದೆ. ಆದುದರಿಂದ ಜನರು ನೈಜ ಆನಂದಮಯ ಜೀವನ ನಡೆಸಲು ಸಾಧ್ಯವಾಗುವುದಕ್ಕೆ ಈ ಹೊಸ ಸಚಿವಾಲಯವು ಶ್ರಮಿಸಲಿದೆ ಎಂದು ಚೌಹಾಣ್‌ ಹೇಳಿದರು.

ಭೋಪಾಲದಲ್ಲಿ ಈಚೆಗೆ ನಡೆದ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚೌಹಾಣ್‌ ಈ ಘೋಷಣೆಯನ್ನು ಮಾಡಿದ್ದು ಭೂತಾನ್‌ನ “ಒಟ್ಟು ರಾಷ್ಟ್ರೀಯ ಸಂತುಷ್ಟಿ ಸೂಚ್ಯಂಕ’ ಪರಿಕಲ್ಪನೆಯ ಆಧಾರದಲ್ಲಿ ತಾವು ಈ ವಿನೂತನ ಸಚಿವಾಲಯವನ್ನು ರೂಪಿಸಲಿರುವುದಾಗಿ ಹೇಳಿದರು.

ಒಟ್ಟು ರಾಷ್ಟ್ರೀಯ ಸಂತುಷ್ಟಿಗೆ ನಾಲ್ಕು ಆಧಾರ ಸ್ತಂಭಗಳಿದ್ದು ಇವು ಆರೋಗ್ಯಕರ ಸೂಚ್ಯಂಕಕ್ಕೆ ಕಾರಣವಾಗುತ್ತವೆ. ಅವೆಂದರೆ ಉತ್ತಮ ಆಡಳಿತ, ದೀರ್ಘ‌ಕಾಲ ಬಾಳುವ ಸಾಮಾಜಿಕ ಆರ್ಥಿಕ ಅಭಿವೃದ್ದಿ, ಸಾಂಸ್ಕೃತಿಕ ಸಿರಿವಂತಿಕೆ ಮತ್ತು ಪರಿಸರ ಸಂರಕ್ಷಣೆ. ಇವುಗಳನ್ನು 9 ಮಾನದಂಡಗಳಲ್ಲಿ ಲೆಕ್ಕ ಹಾಕಲಾಗುತ್ತದೆ. ಮನೋಸ್ವಾಸ್ಥ್ಯ, ಆರೋಗ್ಯ, ಶಿಕ್ಷಣ, ಜೀವನ ಮಟ್ಟ, ಸಾಂಸ್ಕೃತಿಕ ವೈವಿಧ್ಯತೆ ಇವುಗಳಲ್ಲಿ ಮುಖ್ಯವಾಗಿವೆ.

ರಾಜ್ಯ ಬಿಜೆಪಿ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿನಯ ಸಹಸ್ರಬುದ್ದೆ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಲ ಸಾಧನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಅಗತ್ಯ ಎಂದು ಹೇಳಿದರು.
-ಉದಯವಾಣಿ

Write A Comment