ಮುಂಬೈ: ಸಿಮಾನ್ಸ್ ಮತ್ತು ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ವೆಸ್ಟ್ ಇಂಡೀಸ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆ 193 ರನ್ ಗಳ ಬೃಹತ್ ಸವಾಲು ನೀಡಿತ್ತು. ರೋಹಿತ್ ಶರ್ಮಾ (43), ಅಂಜಿಕ್ಯಾ ರಹಾನೆ (40), ವಿರಾಟ್ ಕೊಹ್ಲಿ (ಅಜೇಯ 89 ರನ್) ಮತ್ತು ನಾಯಕ ಧೋನಿ (ಅಜೇಯ 15) ರನ್ ಗಳ ಸಹಾಯದಿಂದ ವಿಂಡೀಸ್ ಎಂದುರು ಬೃಹತ್ ಮೊತ್ತವನ್ನು ಪೇರಿಸಿತು.
ಈ ಮೊತ್ತವನ್ನು ಬೆನ್ನುಹತ್ತಿದ ವಿಂಡೀಸ್ ಗೆ ಬುಮ್ರಾಹ್ ಆರಂಭಿಕ ಆಘಾತ ನೀಡಿದರು. ತಮ್ಮ ಮೊದಲ ಎಸೆತದಲ್ಲೇ ದೈತ್ಯ ಕ್ರಿಸ್ ಗೇಯ್ಲ್ ವಿಕೆಟ್ ಪಡೆಯುವ ಮೂಲಕ ಭಾರತದ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲು ವಿಂಡೀಸ್ ದಾಂಡಿಗರು ಬಿಡಲಿಲ್ಲ. ಬಳಿಕ ಕ್ರೀಸ್ ಗೆ ಬಂದ ಸ್ಯಾಮುಯೆಲ್ಸ್ ಕೂಡ 8 ರನ್ ಗೆ ಔಟ್ ಆದರು. ಆದರೆ ಆ ಬಳಿಕ ಕ್ರೀಸ್ ಗೆ ಆಗಮಿಸಿದ ಸಿಮಾನ್ಸ್ ಭಾರತೀಯ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಚಾರ್ಲ್ಸ್ ಮತ್ತು ಸಿಮಾನ್ಸ್ ಜೋಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ ವಿಂಡೀಸ್ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತು. ಆದರೆ ಈ ಹಂತದಲ್ಲಿ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ 52 ರನ್ ಗಳಿಸಿದ್ದ ಚಾರ್ಲ್ಸ್ ರನ್ನು ಔಟ್ ಮಾಡಿದರು.
ಬಳಿಕ ಬಂದ ರಸೆಲ್- ಸಿಮಾನ್ಸ್ ಜೊತೆಗೂಡಿ ವಿಂಡೀಸ್ ಅನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ವಿಂಡೀಸ್ ತಂಡ 19.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಭಾರತದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಅಲ್ಲದೆ 2016ನೇ ಸಾಲಿನ ಟಿ20 ವಿಶ್ವಕಪ್ ನಲ್ಲಿ ಫೈನಲ್ ಗೇರಿತು. ಇದೇ ಏಪ್ರಿಲ್ 3 ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಅಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಅದ್ಭುತ ಬ್ಯಾಟಿಂಗ್ ಮೂಲಕ ವಿಂಡೀಸ್ ತಂಡದ ಗೆಲುವಿಗೆ ಕಾರಣರಾದ ಲೆಂಡಿ ಸಿಮಾನ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.