ರಾಷ್ಟ್ರೀಯ

ಅಂತೂ ಇಂತೂ 10 ವರ್ಷದ ಬಳಿಕ ಬಂತು ಯೋಧರಿಗೆ ಗುಂಡು ನಿರೋಧಕ ಜಾಕೆಟ್

Pinterest LinkedIn Tumblr

niನವದೆಹಲಿ, ಮಾ.31- ಕಳೆದೊಂದು ದಶಕದಿಂದ ಪದಾತಿ ದಳದ ಯೋಧರಿಗೆ ಅತ್ಯಗತ್ಯವಾಗಿದ್ದ ಗುಂಡು ನಿರೋಧಕ ಅಂಗಿ (ಜಾಕೆಟ್)ಗಳು ಇದೀಗ ಯೋಧರಿಗೆ ದೊರೆತಿವೆ.

ಆದರೆ, ಭಯೋತ್ಪಾದನೆ, ಭಯೋತ್ಪಾದಕರ ವಿರುದ್ಧ ಹೋರಾಡುವ ಈ ಸೈನಿಕರಿಗೆ ಅವಶ್ಯಕವಾಗಿರುವ ಅತ್ಯಾಧುನಿಕ ರೈಫಲ್‍ಗಳು, ಹಗುರವಾದ ಖಂಡಾಂತರ ಹೆಲ್ಮೆಟ್‍ಗಳಿಗೆ ಅವರು ಇನ್ನೂ ಕಾಯಲೇಬೇಕು. ಟಾಟಾ ಗ್ರೂಪ್‍ನಿಂದ ರಿಯಾಯ್ತಿ ದರದಲ್ಲಿ 140 ಕೋಟಿ ರೂ. ವೆಚ್ಚದ 50 ಸಾವಿರ ಗುಂಡು ನಿರೋಧಕ ಅಂಗಿಗಳ ತಯಾರಿಕೆಗೆ ಸೇನೆ ಟಾಟಾ ಅಡ್ವಾನ್ಸಡ್ ಮೆಟೀರಿಯಲ್ಸ್ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಂಡಿತ್ತು.

ಈಗ ಬಹುತೇಕ ಬುಲೆಟ್ ಪ್ರೂಫ್ ಜಾಕೆಟ್‍ಗಳು ಸಿದ್ಧವಾಗುತ್ತಿದ್ದು, ಬರುವ ಆಗಸ್ಟ್‍ನಿಂದ ಹಂತ ಹಂತವಾಗಿ ವಿತರಿಸಲಾಗುವುದು. 2017ರ ಜನವರಿಗೆ ಎಲ್ಲ ಅಂಗಿಗಳ ನೀಡಿಕೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರಕ್ಷಣಾ ಖಾತೆ ಸಚಿವಾಲಯದ ಮೂಲಗಳು ಹೇಳಿವೆ.

ಒಟ್ಟಾರೆ ಭಾರತೀಯ ಸೇನಾ ಸಿಬ್ಬಂದಿಗೆ 3,53,765 ಗುಂಡು ನಿರೋಧಕ ಅಂಗಿಗಳ ಅಗತ್ಯವಿದ್ದು, ಸದ್ಯ 50 ಸಾವಿರ ಜಾಕೆಟ್‍ಗಳು ಲಭ್ಯವಾಗಲಿವೆ. 2012ರಲ್ಲೇ 1.86 ಲಕ್ಷ ಜಾಕೆಟ್‍ಗಳ ಪೂರೈಕೆಯಾಗಬೇಕಿತ್ತು. 2017ಕ್ಕೆ ಉಳಿದ 1.67 ಲಕ್ಷ ಸಿದ್ಧವಾಗಬೇಕಿತ್ತು. ಆದರೆ, ಇದುವರೆಗೆ ಯಾವುದೇ ಹೊಸ ಜಾಕೆಟ್‍ಗಳೂ ಪೂರೈಕೆಯಾಗಿಲ್ಲ. ಇದೇ ರೀತಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಹಗುರ ಶಿರಸ್ತ್ರಾಣಗಳು ಕೂಡ ಅಗತ್ಯವಾಗಿದ್ದು, ಅವುಗಳಿಗೆ ಇನ್ನೂ ಕೂಡ ಯೋಗ ಕೂಡಿ ಬಂದಿಲ್ಲ. ಈ ಬಗ್ಗೆ ಈಗಾಗಲೇ ಅನೇಕ ಸಭೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Write A Comment