ರಾಷ್ಟ್ರೀಯ

ಪಟಿಯಾಲ ಕೋರ್ಟ್‌ ಆವರಣದಲ್ಲಿನ ಹಲ್ಲೆ ಪ್ರಕರಣ: ಪೊಲೀಸರ ಎದುರೇ ನನ್ನನ್ನು ಹೊಡೆದರು: ಕನ್ಹಯ್ಯಾ

Pinterest LinkedIn Tumblr

Kanaiahನವದೆಹಲಿ (ಪಿಟಿಐ): ಪಟಿಯಾಲ ಹೌಸ್ ಕೋರ್ಟ್‌ ಆವರಣದಲ್ಲಿ ವಕೀಲರ ವೇಷದಲ್ಲಿದ್ದವರು ಪೊಲೀಸರ ಎದುರೇ ತನ್ನನ್ನು ಹೊಡೆ‌ದರು, ನೆಲದತ್ತ ನೂಕಿದರು ಹಾಗೂ ಗಾಯಗೊಳಿಸಿದರು…

ಇದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾಕುಮಾರ್ ಅವರು ಸುಪ್ರೀಂಕೋರ್ಟ್‌ ನೇಮಕದ ವಕೀಲರ ತನಿಖಾ ಸಮಿತಿ ಎದುರು ಹೇಳಿದ ಮಾತುಗಳಿವು.

ದೇಶದ್ರೋಹ ಆರೋಪ ಪ್ರಕರಣದ ಸಂಬಂಧ ಕನ್ಹಯ್ಯಾ ಅವರನ್ನು ಫೆಬ್ರುವರಿ 17ರಂದು ಪಟಿಯಾಲ ಹೌಸ್ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ ವೇಳೆ ಅವರ ಮೇಲೆ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಕನ್ಹಯ್ಯಾ ಗಾಯಗೊಂಡಿದ್ದರು. ಈ ವಿಷಯ ತಿಳಿದ ಸುಪ್ರೀಂಕೋರ್ಟ್‌ ಹಿರಿಯ ವಕೀಲರನ್ನೊಳಗೊಂಡ ತನಿಖಾ ಸಮಿತಿ ರಚಿಸಿತ್ತು.

‘ಪೊಲೀಸರು ನನ್ನನ್ನು ಕೋರ್ಟ್‌ ಗೇಟಿನೊಳಗೆ ಕರೆ ತಂದಾಗ, ವಕೀಲರ ಧಿರಿಸಿನಲ್ಲಿದ್ದ ಜನರ ಗುಂಪೊಂದು ನನ್ನ ಮೇಲೆ ದಾಳಿ ಮಾಡಿತು. ಅದಕ್ಕಾಗಿ ಅವರು ಸಜ್ಜಾಗಿ ನಿಂತಿರುವಂತಿತ್ತು. ಅವರು ಇತರರನ್ನು ಕರೆಯುತ್ತಿದ್ದರು. ನನ್ನ ಮೇಲೆ ಹಲ್ಲೆ ನಡೆಸಿದರು.‌

‘ಬೆಂಗಾವಲು ಪೊಲೀಸರು ನನ್ನ ರಕ್ಷಣೆಗೆ ಮುಂದಾದರು. ಆದರೆ, ಅವರಿಗೂ ಹೊಡೆತ ಬಿತ್ತು’ ಎಂದು ಕನ್ಹಯ್ಯಾ ಅವರು ಹಲ್ಲೆ ಘಟನೆಯ ಸನ್ನಿವೇಶವನ್ನು ವಕೀಲರ ಸಮಿತಿ ಎದುರು ವಿವರಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರಗೊಂಡಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ–ಕಪಿಲ್ ಸಿಬಲ್, ರಾಜೀವ್ ಧವನ್, ದುಷ್ಯಂತ್ ದವೆ, ಎ.ಡಿ.ಎನ್.ರಾವ್, ಅಜಿತ್ ಕುಮಾರ್ ಸಿನ್ಹಾ ಹಾಗೂ ಹರೆನ್ ರಾವಲ್– ಆರು ವಕೀಲರ ಸಮಿತಿಯು ಹಲ್ಲೆ ನಡೆದ ದಿನ ಪಟಿಯಾಲ ಹೌಸ್ ಕೋರ್ಟ್ ಆವರಣಕ್ಕೂ ಭೇಟಿ ನೀಡಿತ್ತು.

ಕನ್ಹಯ್ಯಾ ವಿಚಾರಣೆಯ ಬಳಿಕ ಸಿಬಲ್ ಅವರು ಡಿಸಿಪಿ ಜತಿನ್ ನರ್ವಾಲ್ ಅವರನ್ನು ವಿಚಾರಣೆಗೆ ಕರೆದರು.

‘ಕೋರ್ಟ್ ಆವರಣದಲ್ಲಿ ಹಲ್ಲೆ ನಡೆಯಲು ನೀವು ಬಿಟ್ಟಿರಿ? ನಿಮ್ಮ ಸಿಬ್ಬಂದಿ ಅಲ್ಲಿದ್ದರು. ಅವರು ಏನು ಮಾಡುತ್ತಿದ್ದರು? ಕನ್ಹಯ್ಯಾ ಅವರನ್ನು ಹೊಡೆದ ವ್ಯಕ್ತಿ ಕೋರ್ಟ್ ಆವರಣ ಪ್ರವೇಶಿಸಲು ಹೇಗೆ ಅವಕಾಶ ನೀಡಲಾಯಿತು?’ ಎಂದು ಸಮಿತಿ ಡಿಸಿಪಿಯನ್ನು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ನರ್ವಾಲ್, ‘ಬೆಂಬಲಿರೊಂದಿಗೆ ಬಂದ ಆತ, ನ್ಯಾಯಾಲಯದ ಕೊಠಡಿ ಪಕ್ಕದಲ್ಲಿರುವ ಕೊಠಡಿ ಪ್ರವೇಶಿಸಿದ’ ಎಂದರು.

ಬಳಿಕ ಡಿಸಿಪಿಯನ್ನು ಉದ್ದೇಶಿಸಿ ‘ಇರದ ಅರ್ಥ ಪೊಲೀಸರು ಅಲ್ಲಿದ್ದು. ಆದರೆ ಏನೂ ಮಾಡಲಿಲ್ಲ’ ಎಂದು ಸಿಬಲ್ ಹೇಳಿದರು.

ಬಳಿಕ ಸಮಿತಿಯು ಇತರ ಪೊಲೀಸ್ ಅಧಿಕಾರಿಗಳನ್ನು ಕರೆದು ಘಟನೆಯ ಕುರಿತು ವಿಚಾರಣೆ ನಡೆಸಿತು.

Write A Comment