ಬೆಂಗಳೂರು, ಫೆ.21- ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಇರುವ ದುಬಾರಿ ಬೆಲೆಯ ವಾಚ್‌ನ ಮೂಲ ದಾಖಲೆಗಳನ್ನು ಬಿಡುಗಡೆ ಮಾಡದಿದ್ದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಲೆ ಸಂದೇಹ ಬರುತ್ತದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಎಚ್ಚರಿಸಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣರಾದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ಹಮ್ಮಿಕೊಂಡಿದ್ದ ಧನ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಳಿ ಇರುವ 70 ಲಕ್ಷ ಬೆಲೆಯ ಹೋಬ್ಲೆಟ್ ವಾಚ್ ಯಾರು ಉಡುಗೊರೆ ಕೊಟ್ಟಿದ್ದಾರೆಂಬುದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದಾರೆ. ಒಂದು ವೇಳೆ ಅವರ ಬಳಿ ಇದ್ದಿದ್ದರೆ ಕೂಡಲೇ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಪ್ರಹ್ಲಾದ್ ಜೋಷಿ ಅವರು ಈಗಾಗಲೇ ವಾಚ್ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯಕ್ಕೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಯಾವುದೇ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೆ ಬಿಡುವುದಿಲ್ಲ. ಈ ವಿಷಯವನ್ನು ಸಂಸತ್ ಮತ್ತು ಬಜೆಟ್ ಅವೇಶನದಲ್ಲೂ ಚರ್ಚೆ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ಹೇಳಿದರು.
ದೆಹಲಿಯ ಜವಾಹರಲಾಲ್ ವಿವಿಯಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಆದರೆ ಕೆಲವರು ಇದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋ ಕ್ರಮ ಎಂದು ಸದಾನಂದಗೌಡ ಅಸಮಾಧಾನ ಹೊರ ಹಾಕಿದರು. ಹೆಬ್ಬಾಳ ಕ್ಷೇತ್ರದ ಜನತೆ ನಮ್ಮ ಪಕ್ಷದ ಮೇಲೆ ಅಪಾರವಾದ ನಂಬಿಕೆ ಇಟ್ಟು ಅಭ್ಯರ್ಥಿ ನಾರಾಯಣಸ್ವಾಮಿ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಿ ಕೊಟ್ಟಿದ್ದಾರೆ. ಚುನಾವಣೆಗೂ ಮುನ್ನ ಮತದಾರರನ್ನೇ ದೇವರು ಎಂದು ಕರೆಯುತ್ತಾರೆ. ಗೆದ್ದ ಮೇಲೆ ಕ್ಷೇತ್ರದ ಕಡೆ ತಲೆಯೂ ಹಾಕುವುದಿಲ್ಲ.
ನಮ್ಮ ಪಕ್ಷ ಚುನಾವಣೆಗೂ ಮುನ್ನ ನಾವು ಏನು ಭರವಸೆ ಕೊಟ್ಟಿದ್ದೆವೋ ಫಲಿತಾಂಶದ ಬಳಿಕ ಅದನ್ನು ಅನುಷ್ಟಾನ ಮಾಡಲು ಬದ್ಧರಾಗಿದ್ದೇವೆ. ಇದಕ್ಕಾಗಿಯೇ ಮತದಾರರಿಗೆ ಧನ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡ ಅಶೋಕ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.