ಸೆಹೋರ್ (ಮಧ್ಯಪ್ರದೇಶ): ಡಿಜಿಟಲ್ ವ್ಯವಸ್ಥೆ ಅಳವಡಿಕೆ ಮೂಲಕ ರೈತರಿಗೆ ಬೆಳೆ ನಷ್ಟದಿಂದ ಉಂಟಾಗುವ ಸಮಸ್ಯೆ ಹೋಗಲಾಡಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ರಾಷ್ಟ್ರೀಯ ಕೃಷಿ ಮಾರುಕಟ್ಟೆಯನ್ನು ಶೀಘ್ರವೇ ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಅವರು ಗುರುವಾರ ಮಧ್ಯಪ್ರದೆಶದ ಸೆಹೋರ್ ನಲ್ಲಿ ನಡೆದ ರೈತ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿ, ರೈತರು ತಾವು ಬೆಳೆದ ಉತ್ಪನ್ನಗಳನ್ನು ದೇಶದ ಯಾವುದೇ ಮೂಲೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಲು “ಡಿಜಿಟಲ್ ವೇದಿಕೆ”ಯೊಂದನ್ನು ಕೇಂದ್ರ ಸೃಷ್ಟಿಸುತ್ತಿದೆ. ಸಂವಿಧಾನಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏ.14ರಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಇದೊಂದು ಆನ್‌ಲೈನ್ ವೇದಿಕೆಯಾಗಿದೆ ಎಂದು ವಿವರಿಸಿದರು.
ಕಷ್ಟಪಟ್ಟು ಬೆಳೆ ಬೆಳೆದರೂ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅನಿವಾರ್ಯವಾಗಿ ರೈತರು ತಮಗೆ ಸಮೀಪದ ಮಂಡಿಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿದೆ. ಡಿಜಿಟಲ್ ವ್ಯವಸ್ಥೆ ಅಳವಡಿಕೆ ಮೂಲಕ ಈ ಸಮಸ್ಯೆ ಹೋಗಲಾಡಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ರಾಷ್ಟ್ರೀಯ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗುತ್ತಿದೆ. ಇದರಡಿ ರೈತರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿ ಉತ್ಪನ್ನ ಮಾರಬಹುದು ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
2022ಕ್ಕೆ ಭಾರತದ 75ನೇ ಸ್ವಾತಂತ್ರೊತ್ಸವ ಸಂಭ್ರಮವಿದೆ. ಅಷ್ಟರೊಳಗೆ ರೈತರ ಅದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳು ಹಾಗೂ ಕೃಷಿ ಸಮುದಾಯ ಪ್ರತಿಜ್ಞೆ ತೊಡಬೇಕು. ಮೊದಲ ಹಂತದಲ್ಲಿ ಮಾರ್ಚ್ ಅಂತ್ಯದೊಳಗೆ 200 ಮಂಡಿಗಳನ್ನು ಸಂಪರ್ಕಿಸಲಾಗುತ್ತದೆ. 2017ರಲ್ಲಿ 200 ಹಾಗೂ ಉಳಿದ ಮಾರಕಟ್ಟೆಗಳನ್ನು 2018ರಲ್ಲಿ ಬೆಸೆಯಲಾಗುತ್ತದೆ. ಸಗಟು ಮಾರುಕಟ್ಟೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿ ಕೋರಿ ಕರ್ನಾಟಕ, ಗುಜರಾತ್, ತೆಲಂಗಾಣ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳಿಂದ ಪ್ರಸ್ತಾವ ಬಂದಿದೆ ಎಂದರು.