ಭೋಪಾಲ್: ಡಿಜಿಟಲ್ ಇಂಡಿಯಾ ಯೋಜನೆಯ ಪ್ರಯೋಜನವನ್ನು ದೇಶದ ರೈತರಿಗೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ತಂತ್ರಜ್ಞಾನದ ಸಹಾಯದಿಂದ ದೇಶದ 550 ರೈತರ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಡಿಜಿಟಲ್ ಇಂಡಿಯಾ ಯೋಜನೆಯ ಮೂಲಕ ಹಮ್ಮಿಕೊಳ್ಳಲಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ. ಮಧ್ಯ ಪ್ರದೇಶದ ಶಿಹೋರ್ ಜಿಲ್ಲೆಯ ಶೇರ್‌ಪುರ್ ನಲ್ಲಿ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಗೆ ಚಾಲನೆ ನೀಡುತ್ತಾ ಮೋದಿ ಈ ಮಾತುಗಳನ್ನಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಯಾವೆಲ್ಲಾ ಯೋಜನೆಗಳನ್ನು ನೀಡಿದೆ ಎಂಬುದರ ಬಗ್ಗೆ ವಿವರಿಸಿದ ಮೋದಿಯವರು, ದೇಶದ ಕೃಷಿ ಮಾರುಕಟ್ಟೆಯ ಮೂಲಕ ರೈತರಿಗೆ ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆಗೆ ಮಾರಲು ಅವಕಾಶ ಸಿಗುತ್ತದೆ ಎಂದಿದ್ದಾರೆ.
ಬೇರೆ ಬೇರೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ಬೆಳೆಗಳಿಗೆ ವ್ಯತ್ತಸ್ತ ಬೆಲೆ ಇದೆ. ಆದರೆ ರೈತರು ತಮ್ಮ ಸಮೀಪದಲ್ಲಿರುವ ಮಾರುಕಟ್ಟೆಗೆ ಉತ್ಪನ್ನಗಳನ್ನು ಮಾರುತ್ತಾರೆ. ಈ ಕಾರಣದಿಂದಾಗಿ ರೈತರಿಗೆ ತಮ್ಮ ಬೆಳೆಗೆ ತಕ್ಕ ಬೆಲೆ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಯೋಜನೆಯ ಮೂಲಕ ಯಾವ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂಬ ಮಾಹಿತಿಯನ್ನು ರೈತರಿಗೆ ಮೊಬೈಲ್ ಫೋನ್ ಮೂಲಕ ನೀಡಲಾಗುವುದು.
ಅಷ್ಟೇ ಅಲ್ಲದೆ, ಪ್ರಧಾನ ಮಂತ್ರಿಯವರ ಬೆಳೆ ಭೀಮಾ ಯೋಜನೆಯ ಮೂಲಕ ರೈತರು ಅನುಭವಿಸುವ ಕಷ್ಟಗಳನ್ನು ಬಗೆಹರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.