ನವದೆಹಲಿ: ಸಂಸತ್ ಮೇಲೆ ದಾಳಿ ನಡೆಸಿ, ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಅಫ್ಜಲ್ ಗುರು ಬಗ್ಗೆ ಇತ್ತೀಚೆಗಷ್ಟೇ ಪಾಕಿಸ್ತಾನ ನೀಡಿದ್ದ ಹೇಳಿಗೆ ಭಾರತ ತಿರುಗೇಟಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಚಾರವಾಗಿದ್ದು, ಜಮ್ಮು,ಕಾಶ್ಮೀರದ ಬಗ್ಗೆ ಪಾಕಿಸ್ತಾನ ನೀಡುವ ಅಸಂಬದ್ಧ ಹೇಳಿಕೆಯನ್ನು ಸ್ವೀಕರಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಭಾರತ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಅವರು, ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಚಾರವಾಗಿದ್ದು, ಈ ಬಗ್ಗೆ ಪಾಕಿಸ್ತಾನ ನೀಡುವ ಅನಪೇಕ್ಷಿತ ಉಲ್ಲೇಖಗಳನ್ನು ಭಾರತ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಪಾಕಿಸ್ತಾನ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಮಹಮ್ಮದೇ ನಫೀಸ್ ಝಕಾರಿಯಾ ಅವರು, ಭಾರತ ಸರ್ಕಾರ ಅಫ್ಜಲ್ ಗುರುವನ್ನು ವಿಚಾರಣೆ ನಡೆಸಿದ ರೀತಿಯನ್ನು ಕಾಶ್ಮೀರ ಜನತೆ ಎಂದು ಒಪ್ಪಿಕೊಳ್ಳುವುದಿಲ್ಲ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಪಾಕಿಸ್ತಾನ ಖಂಡಿಸುತ್ತದೆ. ಈ ಬಗ್ಗೆ ಪಾಕಿಸ್ತಾನ ಕಾಳಜಿಯನ್ನು ಹೊಂದಿದ್ದು, ವಿಚಾರವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದ್ದರು.