ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನೈಸರ್ಗಿಕ ಶಕ್ತಿ ಮೂಲದಿಂದ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಡಿ ಇಟ್ಟಿರುವುದು ವಿದ್ಯುತ್ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಳ್ಳೆಯದು. ಸಂಭಾವ್ಯ ಸವಾಲುಗಳನ್ನು ಮೆಟ್ಟಿನಿಲ್ಲುವಂತೆ ಸೂಕ್ತವಾಗಿ ಇದು ಸ್ಥಾಪನೆಯಾಗಿ ಇನ್ನಿತರರಿಗೆ ಮಾದರಿಯಾಗಲಿ.
ಮುದ್ರದ ಅಲೆಗಳ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಘಟಕ ಆರಂಭಿಸುವ ಸಂಬಂಧ ರಾಜ್ಯ ಸರಕಾರವು ಫ್ರಾನ್ಸ್ ಮೂಲದ ಕಂಪೆನಿಯ ಜತೆಗೆ ಒಡಂಬಡಿಕೆ ಮಾಡಿಕೊಂಡಿರುವುದು ಪರ್ಯಾಯ ಶಕ್ತಿ ಆಕರಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಒಂದು ಶ್ಲಾಘ್ಯ ಬೆಳವಣಿಗೆ. ಕಲ್ಲೆಣ್ಣೆ, ಕಲ್ಲಿದ್ದಲು, ಪರಮಾಣು – ಹೀಗೆ ಶಕ್ತಿಯನ್ನು ಉತ್ಪಾದಿಸಲು ನಾವು ಇದುವರೆಗೆ ಉಪಯೋಗಿಸುತ್ತಿರುವ ಮೂಲಗಳು ನವೀಕರಿಸಲಾಗದವು ಮತ್ತು ಪರಿಸರಕ್ಕೆ ಹಾನಿಕಾರಕವಾದವು. ಸೌರಶಕ್ತಿ, ಪವನ ಶಕ್ತಿ ಇತ್ಯಾದಿ ನವೀಕರಿಸಬಹುದಾದ, ನೈಸರ್ಗಿಕವಾದ ಮತ್ತು ಪಾರಿಸರಿಕ ಹಾನಿಗೆ ಕಾರಣವಾಗದೆ ಇರುವ ಶಕ್ತಿಮೂಲಗಳ ಬಳಕೆಯನ್ನು ದೊಡ್ಡ ಪ್ರಮಾಣದಲ್ಲಿ ನಾವು ಮಾಡಿಲ್ಲ. ಅಂತಹ ಶಕ್ತಿ ಆಕರಗಳ ಶೋಧ ತುರ್ತು ಅಗತ್ಯವಾಗಿರುವ ಈ ಕಾಲಘಟ್ಟದಲ್ಲಿ ಸರಕಾರ ಮಾಡಿಕೊಂಡಿರುವ ಈ ಒಪ್ಪಂದ ಉತ್ತಮ ಬೆಳವಣಿಗೆ.
ಮುಂಬಯಿಯಲ್ಲಿ ನಡೆಯುತ್ತಿರುವ ಮೇಕ್ ಇನ್ ಇಂಡಿಯಾ ಸಪ್ತಾಹದಲ್ಲಿ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಅವರು ಫ್ರಾನ್ಸ್ ದೇಶದ ತಾರ್ ಕೊವಾಕ್ಸ್ ಸಿಸ್ಟಂ ಸಂಸ್ಥೆಯ ಜತೆಗೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದು ಸುಮಾರು 2,284 ಕೋಟಿ ರೂ. ಮೊತ್ತದ ಭಾರೀ ಯೋಜನೆ. ಸುಮಾರು 300 ಕಿ. ಮೀ.ಗಳಷ್ಟು ಉದ್ದವಾಗಿರುವ ಕರ್ನಾಟಕದ ಕರಾವಳಿಯಲ್ಲಿ ಮಂಗಳೂರು ಬಳಿ ಸಮುದ್ರ ತೆರೆಗಳಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಯಾಗಲಿದೆ.
ಸಮುದ್ರದ ಅಲೆಗಳ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ತತ್ವ ತೀರಾ ಸರಳವಾದದ್ದು. ಎಲ್ಲರಿಗೂ ತಿಳಿದಿರುವಂತೆ ಸಮುದ್ರದ ಅಲೆಗಳು ಸದಾ ಉರುಳುತ್ತಲೇ ಇರುತ್ತವೆ. ಇದರಿಂದ ಸಾಕಷ್ಟು ನೂಕುಬಲ ಉತ್ಪಾದನೆಯಾಗುತ್ತದೆ. ಇದೇ ಶಕ್ತಿಯನ್ನು ಟರ್ಬೈನ್ ತಿರುಗಿಸಲು ಬಳಸಿ ಉತ್ಪಾದಿಸುವುದು ಇದರ ಹಿಂದಿರುವ ತತ್ವ. ಅಲೆಗಳು ನೈಸರ್ಗಿಕವಾದುದರಿಂದ ಇಲ್ಲಿ ಯಾವುದೇ ರೀತಿಯ ಪಾರಿಸರಿಕ ಪ್ರದೂಷಣೆಯಿಲ್ಲ, ಕಲ್ಲಿದ್ದಲು ಅಥವಾ ಅಣು ಶಕ್ತಿಯನ್ನು ಬಳಸುವ ಉಷ್ಣ ವಿದ್ಯುತ್ ಸ್ಥಾವರಗಳಂತೆ ಯಾವುದೇ ಹಾನಿಕಾರಕ ಉಪ ಉತ್ಪನ್ನಗಳೂ ಇದರಿಂದ ಉಂಟಾಗುವುದಿಲ್ಲ.
ಮುಗಿಯದ ಶಕ್ತಿಮೂಲವಾದ ಜಲಶಕ್ತಿಯಿಂದ ವಿದ್ಯುತ್ ಉತ್ಪಾದನೆ ಬಹಳ ಹಿಂದಿನಿಂದಲೇ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಇತ್ತೀಚೆಗಿನ ವರ್ಷಗಳಲ್ಲಿ ಪವನ ಮತ್ತು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ. ಆದರೆ ಈಗಲೂ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಅಥವಾ ಅಣುಶಕ್ತಿಯ ಅವಲಂಬನೆಯೇ ಹೆಚ್ಚು. ಇವೆರಡೂ ತೀವ್ರವಾಗಿ ಪರಿಸರ ಹಾನಿಗೆ ಕಾರಣವಾಗುತ್ತವೆ. ಸಾಕಷ್ಟು ಮಾಲಿನ್ಯವೂ ಉಂಟಾಗುತ್ತದೆ. ಪಳೆಯುಳಿಕೆ ಇಂಧನವಾದ ಕಲ್ಲಿದ್ದಲು ಒಂದಲ್ಲ ಒಂದು ದಿನ ಮುಗಿದು ಹೋಗುವಂಥದು, ನವೀಕರಿಸಲಾಗದ್ದು. ಜತೆಗೆ, ಭೂಮಿ ಬಿಸಿಯೇರುತ್ತಿರುವುದು, ಹವಾಮಾನ ಬದಲಾಗುತ್ತಿರುವುದು ತೀವ್ರವಾಗಿ ಅನುಭವಕ್ಕೆ ಬರುತ್ತಿರುವ ಈ ದಿನಗಳಲ್ಲಿ ಪರಿಸರ ಪ್ರದೂಷಣೆಯನ್ನು ತಡೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮುದ್ರದಲೆಗಳಿಂದ ವಿದ್ಯುತ್ ಉತ್ಪಾದನೆಯ ಸಾಧ್ಯತೆಯನ್ನು ಶೋಧಿಸಲು ಹೊರಟಿರುವುದು ಶ್ಲಾಘ್ಯ.
ನೈಸರ್ಗಿಕ ಶಕ್ತಿಮೂಲವಾದ ಸಮುದ್ರದ ಅಲೆಗಳನ್ನು ಬಳಸಿಕೊಳ್ಳುವುದು ಒಳ್ಳೆಯ ಪ್ರಯತ್ನವಾದರೂ ಕೆಲವೊಂದು ಸವಾಲುಗಳನ್ನು ಎದುರಿಸುವುದಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಇದನ್ನು ಅನುಷ್ಠಾನಿಸಬೇಕಿದೆ. ಸಹಜ ಸ್ಥಿತಿಯಲ್ಲಿ ಅಲೆಗಳಿಂದ ವಿದ್ಯುತ್ ಉತ್ಪಾದನೆ ಸಮರ್ಪಕವಾಗಿ ನಡೆಯಬಹುದು. ಆದರೆ, ಬದಲಾಗುತ್ತಿರುವ ಹವಾಮಾನದ ನೆಲೆಯಲ್ಲಿ ನೋಡಿದರೆ ಚಂಡಮಾರುತ, ಬಿರುಗಾಳಿ, ಸುನಾಮಿಯಂತಹ ವಿಕೋಪಗಳು ಈ ಮಾದರಿಯ ವಿದ್ಯುತ್ ಉತ್ಪಾದನೆಗೆ ಸವಾಲಾಗಬಲ್ಲವು. ಇಂತಹ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಸಿದ್ಧವಿರುವಂತೆ ಈ ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ. ಘಟಕವನ್ನು ಸ್ಥಾಪಿಸಲಿರುವ ಫ್ರಾನ್ಸ್‌ನ ಸಮುದ್ರ ತೀರಗಳ ಪರಿಸ್ಥಿತಿಗೂ ಇಲ್ಲಿಯದ್ದಕ್ಕೂ ಅಜಗಜಾಂತರವಿರುತ್ತದೆ. ಸೂಕ್ತ ಅಧ್ಯಯನದ ಮೂಲಕ ಇಂತಹ ಸವಾಲುಗಳನ್ನು ಉತ್ತರಿಸಬೇಕಾಗಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನೈಸರ್ಗಿಕವಾದ ಶಕ್ತಿಮೂಲದಿಂದ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಡಿ ಇಟ್ಟಿರುವುದು ವಿದ್ಯುತ್ ಕೊರತೆಯನ್ನು ನೀಗಿಸುವ ದೃಷ್ಟಿಯಿಂದಲೂ ಒಳ್ಳೆಯದು. ಸಂಭಾವ್ಯ ಸವಾಲುಗಳನ್ನು ಮೆಟ್ಟಿನಿಲ್ಲುವಂತೆ ಸೂಕ್ತವಾಗಿ ಇದು ಸ್ಥಾಪನೆಯಾಗಿ ಇನ್ನಿತರರಿಗೆ ಮಾದರಿಯಾಗಲಿ.
-ಉದಯವಾಣಿ