1990ರಲ್ಲಿ ಸಚಿನ್ ತೆಂಡೂಲ್ಕರ್ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮುಗಿಸಿ ಮನೆಗೆ ಬರುತ್ತಿದ್ದರು. ಮುಂಬೈ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ತನ್ನ ಅಮ್ಮನ ಬರವಿಗಾಗಿ ಕಾಯುತ್ತಾ ನಿಂತಿದ್ದ ಅಂಜಲಿಗೆ ಗುಂಗುರು ಕೂದಲಿನ ಆ ಕುಡಿಮೀಸೆಯ ಯುವಕ ಕಾಣಿಸಿಕೊಂಡ. ಇಬ್ಬರ ಕಣ್ಣುಗಳು ಪರಸ್ಪರ ಭೇಟಿಯಾದವು. ಸಚಿನ್ ತನ್ನ ತಂಡದೊಂದಿಗೆ ಹೆಜ್ಜೆ ಹಾಕಿದಾಗ ಅಂಜಲಿಯ ಹೃದಯ ಆತನನ್ನೇ ಹಿಂಬಾಲಿಸಿತು. ಆತ ಕ್ರಿಕೆಟಿಗ, ಆತನೇ ಸಚಿನ್ ಎಂಬ ವಿಷಯ ಅಂಜಲಿಗೆ ಆಗ ಗೊತ್ತಿರಲಿಲ್ಲ. ಆಮೇಲೆ ವಿಷಯ ಗೊತ್ತಾಗಿದ್ದೇ ತಡ ಫ್ರೆಂಡ್ ಮೂಲಕ ಸಚಿನ್‌ನ್ನು ಅಂಜಲಿ ಭೇಟಿಯಾಗಿಯೇ ಬಿಟ್ಟಳು.
ವಿಮಾನ ನಿಲ್ದಾಣದಲ್ಲಿ ಮೊದಲ ಕಣ್ಣೋಟದಲ್ಲೇ ಇಬ್ಬರಿಗೂ ಪ್ರೇಮಾಂಕುರುವಾಗಿತ್ತು. ಅದು ಸಚಿನ್ ಕ್ರಿಕೆಟ್ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಕಾಲ. ಇತ್ತ ಅಂಜಲಿ ವೈದ್ಯಕೀಯ ಕಲಿಕೆ ಮುಗಿಸಿ ಪ್ರಾಕ್ಟೀಸ್ ಆರಂಭಿಸಿದ್ದರು. ಅಂಜಲಿಗೆ ಕ್ರಿಕೆಟ್ ಬಗ್ಗೆ ಒಂಚೂರೂ ಗೊತ್ತಿರಲಿಲ್ಲ. ಆದರೆ ಇಬ್ಬರೂ ಪ್ರೀತಿಸತೊಡಗಿದ ನಂತರ ಅಂಜಲಿ ತಮ್ಮ ಕ್ರಿಕೆಟ್ ಜ್ಞಾನವನ್ನು ಹೆಚ್ಚಿಸಿಕೊಂಡರು.
ಅದೊಂದು ದಿನ ಅಂಜಲಿ ಸಚಿನ್‌ನ್ನು ಭೇಟಿ ಮಾಡಲು ಮನೆಗೆ ಬಂದಿದ್ದರು. ಹಾಗೆ ಒಬ್ಬಳು ಹುಡುಗಿ ಮನೆಗೆ ಬಂದರೆ ಮನೆಯವರು ಏನಂತಾರೋ ಎಂಬ ಭಯ ಸಚಿನ್‌ಗೆ. ಇಬ್ಬರೂ ಸೇರಿ ಒಂದು ಪ್ಲಾನ್ ಮಾಡಿದರು. ಅಂಜಲಿ ಪತ್ರಕರ್ತೆ ಎಂದು ಹೇಳಿ ಸಚಿನ್ ಮನೆಗೆ ಭೇಟಿ ನೀಡಿದರು. ಸಚಿನ್ ಒಂದಷ್ಟು ಮಾತಾಡಿ ತಾನು ವಿದೇಶದಿಂದ ತಂದ ಚಾಕ್ಲೇಟ್‌ನ್ನು ಕೊಡಲು ಹೋದರೆ ಅಲ್ಲಿದ್ದದ್ದು ಒಂದೇ ಒಂದು ಚಾಕ್ಲೆಟ್. ಆ ಚಾಕ್ಲೆಟ್‌ನ್ನು ತುಂಡು ತುಂಡು ಮಾಡಿ ಅಂಜಲಿಗೆ ಕೊಟ್ಟಿದ್ದರು ಸಚಿನ್.
ವಿದೇಶದಲ್ಲಿ ಸಚಿನ್ ಇದ್ದರೆ, ಫೋನ್ ಕಾಲ್ ಚಾರ್ಜ್ ಜಾಸ್ತಿ ಆಗುತ್ತದೆ ಎಂದು ಅಂಜಲಿ ಲೆಟರ್ ಗಳನ್ನು ಬರೆಯುತ್ತಿದ್ದರು. 5 ವರ್ಷಗಳ ಕಾಲ ಪ್ರಣಯಪಕ್ಷಿಗಳಾಗಿದ್ದ ಇವರು 1995ರಲ್ಲಿ ವಿವಾಹವಾದರು. ಸಚಿನ್ ಗಿಂತ 6 ವರ್ಷ ಹಿರಿಯಳಾಗಿದ್ದ ಅಂಜಲಿ ಮದುವೆಯಾದ ನಂತರ ವೈದ್ಯಕೀಯ ವೃತ್ತಿಯನ್ನು ಬಿಟ್ಟು ಗೃಹಿಣಿಯಾದರು. ಸಚಿನ್‌ನ ವೃತ್ತಿ ಜೀವನದ ಅಭಿವೃದ್ಧಿಗಾಗಿ ಅಂಜಲಿ ಸದಾ ಆತನ ಜತೆಯಾಗಿ ನಿಂತಳು. ಕುಟುಂಬ ನಿರ್ವಹಣೆಯ ಹೊಣೆಯನ್ನು ತನ್ನ ಹೆಗಲೇರಿಸಿಕೊಂಡು ಸಚಿನ್ ಗಾಗಿ ಪ್ರಾರ್ಥಿಸಿದಳು.
ಸಚಿನ್ ಬ್ಯಾಟಿಂಗ್ ಮಾಡುವಾಗ ಟೀವಿಯ ಮುಂದೆ ಕದಲದೆ ಕುಳಿತುಕೊಳ್ಳುವ ಅಂಜಲಿ ಆತ ಔಟಾಗುವವರೆಗೆ ಅನ್ನ ನೀರು ಸೇವಿಸುವುದೇ ಇಲ್ಲ. ಅಂಜಲಿಯ ಬಗ್ಗೆ ಈ ಎಲ್ಲ ವಿಷಯಗಳನ್ನು ಸಚಿನ್ ತಮ್ಮ ಆತ್ಮಕತೆ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ದೇವರು ನನಗೆ ಕೊಟ್ಟ ಅತ್ಯುತ್ತಮ ವ್ಯಕ್ತಿ ಸಚಿನ್ ಎಂದು ಅಂಜಲಿ ಹೇಳುವಾಗ, ತನಗೆ ದೇವರು ಏನು ಕೊಟ್ಟಿದ್ದಾನೋ ಅದಕ್ಕೆ ಥ್ಯಾಂಕ್ಸ್ ಹೇಳು, ಏನು ಕೊಡಲಿಲ್ಲವೋ ಅದಕ್ಕೂ ಥ್ಯಾಂಕ್ಸ್ ಹೇಳು ಎಂದು ಕಲಿಸಿಕೊಟ್ಟದ್ದೇ ಅಂಜಲಿ ಅಂತಾರೆ ಸಚಿನ್ ತೆಂಡೂಲ್ಕರ್. ಸಚಿನ್ ಕ್ರಿಕೆಟನ್ನು ಪ್ರೀತಿಸಿ ಮುನ್ನಡೆದಾಗ ಅಂಜಲಿ ಸಚಿನ್ ಪ್ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಬಂದರು. ಅವರ ಪ್ರೀತಿ ಹೀಗೆಯೇ ಶಾಶ್ವತವಾಗಿರಲಿ.