ನವದೆಹಲಿ: ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈ ಹಿಂದೆ ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಅರ್ಜಿಯಲ್ಲಿ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ನಿರ್ದೇಶನ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು.
ಈ ಅರ್ಜಿಯನ್ನು ಇಂದು ಪರಿಶೀಲಿಸಿರುವ ನ್ಯಾಯಾಧೀಶ ಟಿ.ಎಸ್.ಠಾಕೂರ್, ಎ.ಕೆ.ಸಿಕ್ರಿ, ಹಾಗೂ ಆರ್. ಭಾನುಮತಿ ಅವರಿದ್ದ ಪೀಠ, ಈ ವಿಚಾರ ಆಯಾ ಸರ್ಕಾರ ಹಾಗೂ ಜನರಿಗೆ ಸಂಬಂಧಪಟ್ಟಿದ್ದಾಗಿದ್ದು, ಪಾಲಿಸಿ ವಿಚಾರಗಳಲ್ಲಿ ಸುಪ್ರೀಂ ತಲೆಹಾಕುವುದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡರೆ ನಾವೇನು ಮಾಡುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದೆ. ಬೆಂಬಲ ಬೆಲೆ ನಿಗದಿ, ರೈತರ ಆತ್ಮಹತ್ಯೆ ತಡೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಬೇಕಾದದ್ದು ಹಾಗೂ ನೀತಿ ರೂಪಿಸಬೇಕಾದದ್ದು ಆಯಾ ಸರ್ಕಾರದ ಕೆಲಸ ಎಂದು ಹೇಳಿದೆ, ಅಲ್ಲದೆ ದಾಖಲು ಮಾಡಿರುವ ಅರ್ಜಿಯನ್ನು ಸಂಬಂಧಿತ ಪ್ರಾಧಿಕಾರದಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದೆ.