ಅಹಮದಾಬಾದ್: ಪಾಟಿದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಹಾಗೂ ಇತರರ ಮೇಲೆ ನಗರ ಅಪರಾಧ ಪತ್ತೆ ದಳ ಮೆಟ್ರೋಪಾಲಿಟನ್ ಕೋರ್ಟ್ನಲ್ಲಿ ಸುಮಾರು 2,700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಜತೆಗೆ 502 ಸಾಕ್ಷಿದಾರರ ಹೇಳಿಕೆಗಳನ್ನು ಸೇರಿಸಿದೆ.
ದೂರವಾಣಿ ಕರೆಗಳ ಮಾಹಿತಿ, ವೀಡಿಯೋ, ಆಡಿಯೋ ಮತ್ತು ಆರೋಪ ಸಮರ್ಥನೀಯ ದಾಖಲೆಗಳುಳ್ಳ ಸಿಡಿಗಳನ್ನು ಪೊಲೀಸರು ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರಲು ಪಟೇಲ್ ಸಮುದಾಯದ ಯುವಕರನ್ನು ಹಿಂಸಾಚಾರಕ್ಕೆ ಇಳಿಯುವಂತೆ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ(ಪಿಎಎಎಸ್)ಯ ನಾಯಕರು ಉತ್ತೇಜಿಸಿದ್ದಾರೆ ಎಂಬುದು ಚಾರ್ಜ್ ಶೀಟ್ನಲ್ಲಿ ಪ್ರಮುಖವಾಗಿ ದಾಖಲಾಗಿದೆ.
ಒಬಿಸಿ ಕೆಟಗರಿಗೆ ಪಟೇಲ್ ಸಮುದಾಯವನ್ನು ಸೇರಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂಬ ಅರಿವಿದ್ದರೂ, ಸಮುದಾಯದ ಯುವಕರನ್ನು ಹಿಂಸಾತ್ಮಕ ಕೃತ್ಯಗಳಿಗೆ ಭಾಗಿಯಾಗುವಂತೆ ಹಾರ್ದಿಕ್ ಮತ್ತು ಕೆಲ ನಾಯಕರು ಪ್ರೇರಣೆ ಮಾಡಿದ್ದಾರೆ ಎನ್ನಲಾಗಿದೆ. ದೇಶ ವಿರೋಧಿ ಕೃತ್ಯ ಸೇರಿದಂತೆ ಹಲವಾರು ಕೇಸುಗಳಿಂದ ಜೈಲು ಸೇರಿರುವ ಹಾರ್ದಿಕ್ಗೆ ಮತ್ತಷ್ಟು ಸಂಕಷ್ಟಗಳು ಎದುರಾಗಿವೆ.
ಜಾಮೀನು ನಿರಾಕರಣೆ
ಸೂರತ್: ರಾಷ್ಟ್ರದ್ರೋಹದ ಆರೋಪದಲ್ಲಿ ಜೈಲು ಸೇರಿರುವ ಹಾರ್ದಿಕ್ ಪಟೇಲ್ಗೆ ಜಾಮೀನು ನೀಡಬಾರದು ಎಂದು ಸೂರತ್ ಪೊಲೀಸರು ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ. ಸಾಕ್ಷ್ಯಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದು ಎಂದು ಪೊಲೀಸರು ಪ್ರಿನ್ಸಿಪಲ್ ಸೆಷನ್ಸ್ ಜಡ್ಜ್ ಗೀತಾ ಗೋಪಿ ಅವರಿಗೆ ಮನವಿ ಸಲ್ಲಿಸಿದೆ. ಜಮೀನು ಅರ್ಜಿ ವಿಚಾರಣೆಯನ್ನು ಫೆಬ್ರವರಿ 12 ಕ್ಕೆ ಮುಂದೂಡಲಾಗಿದೆ.