ಚೆನ್ನೈ: ರಾಷ್ಟ್ರಧ್ವವನ್ನು ಸುಟ್ಟ ಅರೋಪದಡಿ ಬಂಧನಕ್ಕೊಳಗಾಗಿರುವ ಯುವಕನಿಗೆ ಲಾಕ್ ಅಪ್ ನಲ್ಲಿ ಮನಸೋಇಚ್ಛೆ ಥಳಿಸಿ ಕೈ ಮುರಿಯಲಾಗಿದೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ.
ದಿಲೀಪನ್ ಮಹೇಂದ್ರನ್ ಪರ ವಾದ ಮಂಡಿಸುತ್ತಿರುವ ವಕೀಲ ವಿ.ಎಳಂಗೋವನ್ ಜೈಲ್ಲಿಗೆ ಭೇಟಿ ನೀಡಿದ ಬಳಿಕ ಈ ಆರೋಪ ಮಾಡಿದ್ದು, ತಮ್ಮ ಕಕ್ಷಿದಾರನನ್ನು ನ್ಯಾಯಾಲಯದ ಎದುರು ಹಾಜರುಪಡಿಸುವುದಕ್ಕೂ ಮುನ್ನ ಆತನನ್ನು ಮನಬಂದಂತೆ ಥಳಿಸಲಾಗಿದ್ದು ಬಲಗೈ ಮೂಳೆಯನ್ನು ಮುರಿಯಲಾಗಿದೆ ಎಂದು ಆರೋಪಿಸಿದ್ದಾರೆ.
“ಬಂಧನಕ್ಕೊಳಗಾದ 4 ದಿನಗಳ ನಂತರ ದಿಲೀಪನ್ ಮಹೇಂದ್ರನ್ ನನ್ನು ಭೇಟಿ ಮಾಡಿದ್ದೆ, ಈ ವೇಳೆ ಪೊಲೀಸರು ತನಗೆ ಥಳಿಸಿರುವ ಘಟನೆಯನ್ನು ವಿವಿರಿಸಿದ” ಎಂದು ಆರೋಪಿ ಪರ ವಕೀಲ ಎಳಂಗೋವನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂಲತಃ ತಮಿಳುನಾಡು ಮೂಲದ ನಾಗಪಟ್ಟಣಂ ಮೂಲದ ದಿಲೀಪನ್ ಮಹೇಂದ್ರನ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಇಡುತ್ತಿರುವ ಫೊಟೋಗಳನ್ನು ಅಪ್ ಲೋಡ್ ಮಾಡಿದ್ದು ವೈರಲ್ ಆಗಿತ್ತು. ಬಂಧನದ ನಂತರ ಕೈ ಮುರಿದುಕೊಂಡು ನಿಂತಿರುವ ದಿಲೀಪನ್ ನರೇಂದ್ರನ್ ನ ಫೋಟೊ ವೈರಲ್ ಆಗಿದೆ.
ಕೈ ಮುರಿಯುವಂತೆ ಥಳಿಸಿರುವುದೂ ಅಲ್ಲದೇ ಪೊಲೀಸರು ಲಾಕ್ ಅಪ್ ನಲ್ಲಿ ಥಳಿಸಿದ್ದನ್ನು ನ್ಯಾಯಾಧೀಶರೆದುರು ಹೇಳಿದರೆ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ದಿಲೀಪನ್ ಮಹೇಂದ್ರನ್ ಪರ ವಕೀಲರು ಆರೋಪಿಸಿದ್ದಾರೆ.