ಕೇಂದ್ರಾಪರ: ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ, ತನ್ನ ಪತ್ನಿ ಮತ್ತು ಎರಡು ವರ್ಷದ ಹೆಣ್ಣು ಮಗುವನ್ನೇ ಸಜೀವ ದಹನ ಮಾಡಿರುವ ಘಟನೆ ಒಡಿಶಾದ ಕೇಂದ್ರಾಪರ ಜಿಲ್ಲೆಯ ಕೊರಾಂಡಾ ಹಳ್ಳಿಯಲ್ಲಿ ನಡೆದಿದೆ.
ಪತ್ನಿ ಸುರೇಖಾ ಸಾಹೂ(29) ಮತ್ತು ಮಗಳು ಸ್ನೇಹಾಂಜಲಿ(2) ಮೃತಪಟ್ಟ ದುರ್ದೈವಿಗಳು. ಇವರಿಬ್ಬರ ಸುಟ್ಟ ಅವಶೇಷಗಳು ಬಾತ್ ರೂಂನಲ್ಲಿ ಪತ್ತೆಯಾಗಿದೆ.
ನಾಲ್ಕು ವರ್ಷಗಳ ಹಿಂದೆ ಬಿಕ್ರಂ ಸಾಹೂ(32) ಎಂಬುವವನೊಂದಿಗೆ ಸುರೇಖಾ ವಿವಾಹವಾಗಿತ್ತು. ಈ ದಂಪತಿಗಳಿಗೆ ಎರಡು ವರ್ಷದ ಹೆಣ್ಣು ಮಗುವಿತ್ತು. ಆದರೆ, ಬಿಕ್ರಂ ಪ್ರತಿನಿತ್ಯ ವರದಕ್ಷಿಣೆಗಾಗಿ ಪೀಡಿಸಿ ಕಿರುಕುಳ ನೀಡುತ್ತಿದ್ದನು. ಆದರೆ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.
ಸುರೇಖಾ ಮತ್ತು ಸ್ನೇಹಾಂಜಲಿ ಮೃತಪಟ್ಟಿರುವ ವಿಷಯ ಸ್ಥಳೀಯರು ಸುರೇಖಾ ತಂದೆ ಹರೀಶ್ಚಂದ್ರ ಬೆಹ್ರಾ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹರೀಶ್ಚಂದ್ರ ರಾಜ್ ಕನಿಕಾ ಪೊಲೀಸ್ ಠಾಣೆಯಲ್ಲಿ ಬಿಕ್ರಾಂ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಬಿಕ್ರಾಂ ಮತ್ತು ಆತನ ತಂದೆ ಬೃಂದಾಬನ್ ಸಾಹೂ(63) ಅವರನ್ನು ಬಂಧಿಸಿದ್ದರು. ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಶುಕ್ರವಾರ ರಾತ್ರಿ ಸುರೇಖಾ ಮತ್ತು ಮಗುವನ್ನು ಬೆಂಕಿ ಹಚ್ಚಿ ದಹನ ಮಾಡಲಾಯಿತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.